ಕನ್ನಡ ಚಿತ್ರರಂಗದಲ್ಲೀಗ ಉತ್ತಮ ಕಥೆಯುಳ್ಳ ಚಿತ್ರಗಳನ್ನು ಜನರು ಹೆಚ್ಚಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ಅಂತಹದ್ದೇ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವೇ 'ನಾನು, ಅದು ಮತ್ತು ಸರೋಜ'. ಲೂಸ್ ಮಾದ ಯೋಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದೀಗ ಟ್ರೈಲರ್ ಅನಾವರಣಗೊಂಡಿದೆ.
ನಟ ಲೂಸ್ ಮಾದ ಯೋಗಿ ಮಾತನಾಡಿ, ನನಗೆ ನಿರ್ದೇಶಕ ವಿನಯ್ ಅವರು ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ತಮಿಳಿನಲ್ಲಿ ವಿಜಯ್ ಸೇತುಪತಿ ಅವರ ಸಿನಿಮಾವೊಂದನ್ನು ನೋಡಿದ್ದೆ. ಆಗಿನಿಂದ ನನಗೂ ಆ ರೀತಿಯ ಪಾತ್ರ ಮಾಡಬೇಕೆಂಬ ಆಸೆಯಿತ್ತು. ಒಂದೇ ತರಹದ ಸಿನಿಮಾ ಮಾಡುವುದಕ್ಕಿಂತ ವಿಭಿನ್ನ ಕಥೆಯ ಸಿನಿಮಾಗಳಲ್ಲಿ ನಟಿಸಲು ಇಷ್ಟ. ಈ ವರ್ಷದ ಕೊನೆಗೆ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟಿ ಅಪೂರ್ವ ಭಾರದ್ವಾಜ್ ಮಾತನಾಡಿ, ನನ್ನದು ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರ. ಸಾಮಾನ್ಯವಾಗಿ ಬೇರೆ ನಟಿಯರು ಈ ಪಾತ್ರ ಮಾಡಲು ಮುಜುಗರ ಪಡುತ್ತಾರೆ. ನನಗೂ ಮೊದಲು ಸ್ವಲ್ಪ ಮುಜುಗರವಾಯಿತು. ಆದರೆ ಪಾತ್ರವನ್ನು ಪಾತ್ರ ಎಂದು ತಿಳಿದು, ನಟಿಸಿದೆ. ಚಿತ್ರ ಚೆನ್ನಾಗಿ ಬಂದಿದೆ ಎಂದರು. ಇವರ ಜೊತೆಗೆ ಹಿರಿಯ ನಟ ದತ್ತಣ್ಣ, ಸಂದೀಪ್, ಕುರಿ ಬಾಂಡ್ ರಂಗ, ಪ್ರವೀಣ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.