ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಸಿನಿಮಾ 'ಅನ್ ಲಾಕ್ ರಾಘವ'. ಯುವ ನಟ ಮಿಲಿಂದ್ ಹಾಗೂ ನಟಿ ರೆಚೆಲ್ ಡೇವಿಡ್ ಅಭಿನಯವಿರುವ ಈ ಚಿತ್ರದ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ ಚಿತ್ರದ ಹಾಡೊಂದು ಅನಾವರಣಗೊಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ.
ಗೀತೆರಚನೆಕಾರ ಹೃದಯಶಿವ ಅವರ ಸಾಹಿತ್ಯ, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಇರುವ 'ನನ್ ಹುಡುಗಿ' ಎಂಬ ಹಾಡು ಸಾಯಿ ವಿಘ್ನೇಶ್ ಕಂಠಸಿರಿಯಲ್ಲಿ ಇಂಪಾಗಿ ಮೂಡಿಬಂದಿದೆ. ನಾಯಕ ನಟ ಮಿಲಿಂದ್ ಹುಟ್ಟುಹಬ್ಬದಂದು ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಹಾಡಿನ ಬಗ್ಗೆ, ಸಿನಿಮಾ ಕುರಿತು ಚಿತ್ರತಂಡ ಕೆಲ ಮಾಹಿತಿಯನ್ನೂ ಹಂಚಿಕೊಂಡಿದೆ.
ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾತನಾಡಿ, ಹಲವು ವಿಶೇಷಗಳನ್ನು ಹೊಂದಿರುವ 'ಅನ್ ಲಾಕ್ ರಾಘವ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಪ್ರಥಮ ಪ್ರತಿ ಬರಲಿದೆ. ಮಿಲಿಂದ್ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಹಾಡಿನ ಚಿತ್ರೀಕರಣ ಚಿತ್ರದುರ್ಗದಲ್ಲಿ ಎರಡು ದಿನಗಳ ಕಾಲ ನಡೆದಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರೀಕರಣ ನಡೆದಿತ್ತು. ಮಿಲಿಂದ್ ಹುಟ್ಟುಹಬ್ಬದಂದು ಈ ಹಾಡು ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ನೀಡಿರುವ ಎಲ್ಲಾ ಹಾಡುಗಳು ಬಹಳ ಚೆನ್ನಾಗಿವೆ. ಚಿತ್ರವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.