ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಭರ್ಜರಿ ಯಶಸ್ಸು ತಂದುಕೊಡಲು ಸಜ್ಜಾಗಿರುವ ಬಹುನಿರೀಕ್ಷಿತ ಚಿತ್ರ 'ಕಬ್ಜ'. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ, ನಿರ್ದೇಶಕ ಆರ್ ಚಂದ್ರು ನಿರ್ದೇಶನದ 'ಕಬ್ಜ' ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸಖತ್ ಸದ್ದು ಮಾಡುತ್ತಿದೆ. ಸ್ಟಾರ್ ನಟರು, ಅದ್ಧೂರಿ ಮೇಕಿಂಗ್, ಟೀಸರ್, ಹಾಡಿನಿಂದಲೇ ಹವಾ ಸೃಷ್ಟಿಸಿರೋ ಕಬ್ಜ ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ.
ಅದ್ಧೂರಿ ಮೇಕಿಂಗ್ ವಿಚಾರಕ್ಕೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಕಬ್ಜ ಸಿನಿಮಾ ಎಷ್ಟು ಶ್ರೀಮಂತವಾಗಿ ಮೂಡಿ ಬಂದಿರಬಹುದು ಎಂಬುದಕ್ಕೆ ಸಾಕ್ಷಿ ಟ್ರೆಡಿಷನಲ್ ಲುಕ್ನಲ್ಲಿ ನಟಿ ಶ್ರೀಯಾ ಶರಣ್ ಮಿಂಚಿರುವ ನಮಾಮಿ ಹಾಡು ಸಾಕು. ಹೌದು, ಈ ಹಾಡಿಗಾಗಿ ನಿರ್ದೇಶಕ ಆರ್ ಚಂದ್ರು ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದಾರೆ.
ಚಂದ್ರ ಸಿನಿಮಾ ನಂತರ ಬಹಳ ವರ್ಷಗಳ ಬಳಿಕ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿರುವ ಸೌತ್ ನಟಿ ಶ್ರೀಯಾ ಶರಣ್ ಕಬ್ಜ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಶ್ರೀಯಾ ಶರಣ್ ಲುಕ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ನಮಾಮಿ ಹಾಡು ಕನ್ನಡ ಅಲ್ಲದೇ ಬಹು ಭಾಷೆಯಲ್ಲಿ ಬಿಡುಗಡೆ ಆಗಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ನಮಾಮಿ ಹಾಡು ಕೇಳುಗರ ಮನಸೂರೆಗೊಳ್ಳುತ್ತಿದೆ. ಗೀತ ರಚನೆಕಾರ ಕಿನ್ನಾಲ್ ರಾಜ್ ಬರೆದಿರುವ ಸಾಹಿತ್ಯಕ್ಕೆ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್ ಅಷ್ಟೇ ಸೊಗಸಾಗಿ ಹಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ 1960-1984ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ. ಭಾರತೀಯ ಇತಿಹಾಸದಲ್ಲಿ ಸದ್ದು ಮಾಡುತ್ತಾನೆ. ಈ ಕಥಾಹಂದರವುಳ್ಳ ಕಬ್ಜ ಚಿತ್ರ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಕುತೂಹಲ ಮೂಡಿಸಿ ಮತ್ತು ಸಿನಿಪ್ರಿಯರ ನಿರೀಕ್ಷೆ ಹೆಚ್ಚಿಸಿದೆ.