ಕಿರುತೆರೆಯಲ್ಲಿ ಕನ್ನಡಿಗರ ಮನಗೆದ್ದಿರುವ ಅಭಿದಾಸ್, ನಗುವಿನ ಸುಂದರಿ ಶರಣ್ಯ ಶೆಟ್ಟಿ ಸ್ಕ್ರೀನ್ ಶೇರ್ ಮಾಡಿರುವ ಸಿನಿಮಾ 'ನಗುವಿನ ಹೂಗಳ ಮೇಲೆ'. ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರೋ ನಗುವಿನ ಹೂಗಳ ಮೇಲೆ ಚಿತ್ರದ ಎರಡನೇ ಹಾಡು ಅನಾವರಣಗೊಂಡಿದೆ. ಶೀರ್ಷಿಕೆಯಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಿರುವ 'ನಗುವಿನ ಹೂಗಳ ಮೇಲೆ' ಚಿತ್ರತಂಡ ಕೆಲ ಮಾಹಿತಿ ಹಂಚಿಕೊಂಡಿದೆ.
ನಟ ಅಭಿದಾಸ್ ಮಾತನಾಡಿ, ''ಸೋಲೋ ಹೀರೋ ಆಗಿ ಇದು ನನ್ನ ಮೊದಲ ಚಿತ್ರ. ಸಿನಿಮಾಗಾಗಿ ನನ್ನನ್ನು ಸೆಲೆಕ್ಟ್ ಮಾಡಿದ್ದಕ್ಕೆ ವೆಂಕಟ್, ರಾಧಾ ಮೋಹನ್ ಅವರಿಗೆ ಧನ್ಯವಾದಗಳು. ನಾಲ್ಕು ಮೆಲೋಡಿ ಹಾಡುಗಳಿವೆ. 'ಇರಲಿ ಬಿಡು', 'ಗೊತ್ತಿಲ್ಲ ಯಾರಿಗೂ' ನನ್ನ ಮೆಚ್ಚಿನ ಹಾಡುಗಳು ಎಂದು ತಿಳಿಸಿದರು.
ನಟಿ ಶರಣ್ಯ ಶೆಟ್ಟಿ ಮಾತನಾಡಿ, ''ನಗುವಿನ ಹೂಗಳ ಮೇಲೆ ನನಗೆ ಬಹಳ ವಿಶೇಷ ಸಿನಿಮಾ. ಸೋಲೋ ಹೀರೋಯಿನ್ ಆಗಿ ಇದು ನನ್ನ ಫಸ್ಟ್ ಮೂವಿ. ಎರಡು ವರ್ಷಗಳ ಹಿಂದೆ ಶೂಟಿಂಗ್ ನಡೆಸಿದ್ದೆವು. ಪರದೆ ಮೇಲೆ ನನ್ನ ಮುಗ್ಧತೆ ಕಾಣಿಸುತ್ತದೆ. ಶೂಟಿಂಗ್ ಪ್ರೊಸೆಸ್ ಬಹಳ ಚೆನ್ನಾಗಿತ್ತು. ಟ್ರೂ ಲವ್ ಸ್ಟೋರಿ ಬೇಸ್ಡ್ ಸಿನಿಮಾ. ತನು ಮನುವಿನ ಪ್ರೇಮಕಥೆ ನಗುವಿನ ಹೂಗಳ ಮೇಲೆ. ನಾನು ತೆರೆಮೇಲೆ ಚಿತ್ರ ನೋಡಲು ಕಾತುರಳಾಗಿದ್ದೇನೆ'' ಎಂದರು.
ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾತನಾಡಿ, ''ನಗುವಿನ ಹೂಗಳ ಮೇಲೆ ಎಂಬ ಶೀರ್ಷಿಕೆಯೇ ಬಹಳ ಚೆನ್ನಾಗಿದೆ. ತೂಕವಾದ ಹೆಸರು. ಡಾ. ರಾಜ್ಕುಮಾರ್ ಸರ್ ಹಾಡಿರುವ, ಚಿ. ಉದಯ್ ಶಂಕರ್ ಬರೆದಿರುವ ಭಾಗ್ಯವಂತರು ಸಿನಿಮಾದ ಹಾಡಿನ ಎರಡನೇ ಚರಣದಲ್ಲಿ ಬರುವ ತೂಕವಿರುವ ಪದ ಇದು. ಹೀಗಾಗಿ ನಮ್ಮ ಕಂಟೆಂಟ್ ಅನ್ನು ಬಹಳ ಚೆನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲೆ ಹೆಚ್ಚಿತ್ತು. ಶರಣ್ಯ ಹಾಗೂ ಅಭಿ ಕಾಂಬಿನೇಷನ್ ಚೆನ್ನಾಗಿ ವರ್ಕೌಟ್ ಆಗಿದೆ. ಇದು ಒಂದೊಳ್ಳೆ ಪ್ರೇಮಕಥೆ. 18 ವರ್ಷದಿಂದ 80 ವರ್ಷದವರು ವೀಕ್ಷಿಸಬಹುದು. ಪ್ರೇಮ ಅನ್ನೋದಕ್ಕೆ ಸಾವಿಲ್ಲ, ವಯಸ್ಸಿಲ್ಲ. ಪ್ರತಿಯೋರ್ವ ಕಲಾವಿದರು, ತಂತ್ರಜ್ಞರು ನಮಗೆ ಬೆಂಬಲವಾಗಿ ನಿಂತಿದ್ದರು. 27 ದಿನಗಳ ಶೂಟಿಂಗ್ ಮಾಡಿ ಮುಗಿಸಿದ್ದೇವೆ'' ಎಂದು ತಿಳಿಸಿದರು.