ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಂದಿನಿ ಮತ್ತು ಅಮುಲ್ ಉತ್ಪನ್ನಗಳ ಮಾರಾಟ ವಿಷಯ ರಾಜಕೀಯ ಕಚ್ಚಾಟದ ವಸ್ತುವಾಗಿದೆ. ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಬಗ್ಗೆ ಟ್ವೀಟ್ ಮಾಡಿ ನಂದಿನಿಯ ಮೇಲಿನ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಟ್ವೀಟ್ ವಿವರ:''ನಂದಿನಿ ನಮ್ಮವಳು ಅಲ್ಲ- 'ನನ್ನವಳು', ಆರೋಗ್ಯದಾಯಿನಿ. ನಾನು ಕೆಎಂಎಫ್ನ ಮೈಸೂರು ಡೈರಿಯಲ್ಲಿ ಆರು ವರ್ಷ ದಿನಗೂಲಿ ಮಾಡಿ ವ್ಯಾಸಂಗ ಮಾಡುತ್ತಾ ಬದುಕು ಕಟ್ಟಿಕೊಂಡವನು. ನಾಗತಿಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಮಾಡಿಕೊಟ್ಟ ಅಭಿವ್ಯಕ್ತಿ ಹಾಲು ಉತ್ಪಾದಕರ ಸಂಘ ಯಶಸ್ವಿಯಾಗಿ ನಡೆಯುತ್ತಿದೆ. ನಂದಿನಿ ಇಲ್ಲದ ಗ್ರಾಮ್ಯ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ'' ಎಂದು ತಿಳಿಸಿದ್ದಾರೆ.
ನಂದಿನಿ ಮತ್ತು ಅಮುಲ್ ವಿವಾದ ದಿನೇ ದಿನೆ ತಾರಕಕ್ಕೇರುತ್ತಿರುವ ಈ ಹೊತ್ತಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಲಾ ದಿನಗಳಲ್ಲಿ ನಂದಿನಿ ಡೈರಿಯಲ್ಲಿ ಕೆಲಸ ಮಾಡಿದ್ದನ್ನು, ಕೆಲಸದ ಜೊತೆಗೆ ವಿದ್ಯಾಭ್ಯಾಸ ಮುಂದುವರೆಸಿರುವುದನ್ನು ಅವರು ಸ್ಮರಿಸಿದ್ದಾರೆ. ನಂದಿನಿ (ಕೆಎಂಎಫ್) ಸಂಸ್ಥೆಯೊಂದಿಗೆ ತಮಗೆ ಭಾವನಾತ್ಮಕ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾರೆ.
ನಾಗತಿಹಳ್ಳಿ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು, "ಸಮಸ್ಯೆ ಇರುವುದು ನಂದಿನಿಗಲ್ಲ ಸರ್, ನಂದಿನಿಯ ಮೂಲಕ್ಕೆ. ಅದ್ರ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ" ಎಂದು ಹೇಳಿದ್ದಾರೆ. ''ಸದ್ಯ ಚಲನಚಿತ್ರ ರಂಗದಿಂದ ನೀವು ಒಬ್ಬರಾದರೂ ಮಾತಾಡಿದ್ರಲ್ಲ, ಸಾಕು ಬಿಡಿ'' ಎಂದು ಮತ್ತೋರ್ವರು ತಿಳಿಸಿದ್ದಾರೆ. ಇನ್ನೋರ್ವರು ಕಾಮೆಂಟ್ ಮಾಡಿ, "ಹೌದು ಸರ್ ನಮಗೆ ನಂದಿನಿ ಬದುಕಿನ ಜೀವನಾಡಿ. ನಮ್ಮ ಜೀವನ, ವಿದ್ಯಾಭ್ಯಾಸ ಎಲ್ಲವೂ ನಂದಿನಿಯಿಂದಲೇ'' ಎಂದಿದ್ದಾರೆ. "ನಂದಿನಿ ಜೊತೆ ಅಮುಲ್ ಕಲ್ಪಿಸಿಕೊಂಡರೆ ಗ್ರಾಮ್ಯ ಬದುಕು ಇನ್ನೂ ದೊಡ್ಡದಾಗಿ ಕಾಣುತ್ತೆ. ಮಾರ್ಕೆಟ್ ದೊಡ್ಡದಾದರೆ ಆದಾಯವೂ ದೊಡ್ಡದಾಗುತ್ತದೆ ಅಲ್ವೇ?" ಇನ್ನೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯ ತಿಳಿಸಿದ್ದಾರೆ.