ಕರ್ನಾಟಕ

karnataka

ETV Bharat / entertainment

ಶ್ರೀ ಕನ್ನಿಕಾ ಪರಮೇಶ್ವರಿ ಬ್ರಹ್ಮರಥೋತ್ಸವ: ನಾಗಲೋಕ ನಾಗಕನ್ನಿಕೆ ಶ್ರೀವಾಸವಿ ಕಿರುಚಿತ್ರ ಪ್ರದರ್ಶನ - malleshwaram Kannika Parameshwari temple

ಮಲ್ಲೇಶ್ವರಂ ಕನ್ನಿಕಾ ಪರಮೇಶ್ವರಿ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ "ನಾಗಲೋಕ ನಾಗಕನ್ನಿಕೆ ಶ್ರೀವಾಸವಿ" ಎಂಬ ಐದು ನಿಮಿಷಗಳ ಕಿರುಚಿತ್ರ ಪ್ರಸಾರವಾಗುತ್ತಿದೆ.

Nagaloka Nagakannike Shrivasavi
ನಾಗಲೋಕ ನಾಗಕನ್ನಿಕೆ ಶ್ರೀವಾಸವಿ ಕಿರುಚಿತ್ರ

By

Published : Dec 27, 2022, 5:55 PM IST

ರಾಮಧ್ಯಾನ, ಅಬ್ಬರ, ತ್ರಿಶೂಲಂ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ನಿಮಿಕಾ ರತ್ನಾಕರ್. ಗ್ಲ್ಯಾಮರ್ ಲುಕ್​ನಲ್ಲಿ ಗಮನ ಸೆಳೆಯುವ ನಿಮಿಕಾ ರತ್ನಾಕರ್ ಅವರು ಶ್ರೀ ಕನ್ನಿಕಾ ಪರಮೇಶ್ವರಿ ದೇವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ನಾಗಲೋಕ ನಾಗಕನ್ನಿಕೆ ಶ್ರೀವಾಸವಿ: ಶ್ರೀ ಕನ್ನಿಕಾ ಪರಮೇಶ್ವರಿ ಮಾತೆಯ ಭಕ್ತರು ವಿಶ್ವದೆಲ್ಲೆಡೆ ಇದ್ದಾರೆ. ಅದರಲ್ಲೂ ಬೆಂಗಳೂರಿನ ಮಲ್ಲೇಶ್ವರಂ 8ನೇ ಕ್ರಾಸ್​ನಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ. ಈ ಬಾರಿಯ ಬ್ರಹ್ಮ ರಥೋತ್ಸವದ ವಿಶೇಷವೆಂದರೆ "ನಾಗಲೋಕ ನಾಗಕನ್ನಿಕೆ ಶ್ರೀವಾಸವಿ" ಎಂಬ ಐದು ನಿಮಿಷಗಳ ಕಿರುಚಿತ್ರ ಪ್ರದರ್ಶನ.

ನಾಗಲೋಕ ನಾಗಕನ್ನಿಕೆ ಶ್ರೀವಾಸವಿ ಕಿರುಚಿತ್ರತಂಡ

ಚಿತ್ರತಂಡದಲ್ಲಿ ಯಾರೆಲ್ಲಾ ಕೆಲಸ ಮಾಡಿದ್ದಾರೆ?: ನಿರ್ದೇಶಕ ಲಕ್ಕಿ ಶಂಕರ್ ಈ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ. ಜೈ ಆನಂದ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ನಿಮಿಕಾ ರತ್ನಾಕರ್ ವಾಸವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಲಿಂಗು ಶ್ರೀಧರ್, ಪ್ರಸನ್ನ ಗೌಡ ಅಭಿನಯಿಸಿದ್ದಾರೆ. ಜೇಮ್ಸ್ ಅವರ ಸಂಗೀತ ನಿರ್ದೇಶನ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ. ಶಶಾಂಕ್ ಶೇಷಗಿರಿ ಹಾಡೊಂದನ್ನು ಹಾಡಿದ್ದಾರೆ.

ವಾಸವಿ ದೇವಿಗೆ ಬ್ರಹ್ಮ ರಥೋತ್ಸವ: ಭಾರತದಾದ್ಯಂತ ಅನೇಕ ವಾಸವಿ ದೇವಿಯ ದೇವಸ್ಥಾನಗಳಿವೆ. ಆದರೆ ವಾಸವಿ ದೇವಿಗೆ ಬ್ರಹ್ಮ ರಥೋತ್ಸವ ನಡೆಯುವುದು ಕೇವಲ ಮಲ್ಲೇಶ್ವರಂ ವಾಸವಿ ದೇವಸ್ಥಾನದಲ್ಲಿ ಮಾತ್ರ. ಕಳೆದ ಇಪ್ಪತ್ತು ವರ್ಷಗಳಿಂದ ಅದ್ಧೂರಿಯಾಗಿ ಬ್ರಹ್ಮ ರಥೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ವಿಶೇಷವೆಂದರೆ "ನಾಗಕನ್ಯೆ ಶ್ರೀವಾಸವಿ" ಎಂಬ ಭವ್ಯ ನಾಗಲೋಕದ ಸೃಷ್ಟಿ.

ದೇವಸ್ಥಾನದ ಮಹಾದ್ವಾರದಿಂದ ಹುತ್ತದೊಳಗೆ ಆಗಮಿಸಿ, ಸುಮಾರು 150 ಅಡಿಗಳ ಉದ್ದದ ಸುರಂಗದೊಳಗೆ ವಿವಿಧ ಸರ್ಪಗಳ ದರ್ಶನ. ಆನಂತರ ನಾಗಕನ್ನಿಕೆಯಾಗಿ ನಿಂತು ಭಕ್ತರನ್ನು ಅನುಗ್ರಹಿಸುವ ತಾಯಿ ವಾಸವಿಯ ದರ್ಶನ.‌ ಅಬ್ಬಾ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ ಈ ಕಿರುಚಿತ್ರ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಕಲಾ ನಿರ್ದೇಶಕ ವಸಂತ ಎಂ ಕುಲಕರ್ಣಿ ಅವರ ಸಾರಥ್ಯದಲ್ಲಿ ಚಿತ್ರ ನಿರ್ಮಾಣವಾಗಿದೆ.

ಆರ್ಯ ವೈಶ್ಯ ಸಂಘದ ಸೇವೆ: ಮಲ್ಲೇಶ್ವರಂ ಆರ್ಯ ವೈಶ್ಯ ಸಂಘದಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿರುತ್ತೇವೆ. ಅಡುಗೆ ಮಾಡಿಕೊಳ್ಳಲು ಅಶಕ್ತರಾಗಿರುವ ನೂರಕ್ಕೂ ಅಧಿಕ ಕುಟುಂಬಕ್ಕೆ ನಮ್ಮ ಸಂಘದಿಂದ ಬೆಳಗ್ಗೆ - ರಾತ್ರಿ ಆಹಾರ ವಿತರಿಸುವುದು, ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಡಯಾಲಿಸಿಸ್ ಮಾಡಿಸುವುದು ಸೇರಿದಂತೆ ಮುಂತಾದ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದ ಕಾರ್ಯದರ್ಶಿ ಆರ್.ಪಿ. ರವಿಶಂಕರ್ ಅವರು, ನಾವು ಪ್ರತೀ ಎರಡು ವರ್ಷಕೊಮ್ಮೆ ನಡೆಯುವ ಬ್ರಹ್ಮೋತ್ಸವದಲ್ಲೂ ಬೇರೆ ಬೇರೆ ರೀತಿಯ ಕಾನ್ಸೆಪ್ಟ್ ಮೂಲಕ ದೇವಸ್ಥಾನವನ್ನು ಅಲಂಕರಿಸುತ್ತೇವೆ. ಇದಕ್ಕೆ ಪ್ರಮುಖ ಕಾರಣ ಹದಿನೈದು ವರ್ಷ ಒಳಗಿನ ಮಕ್ಕಳು ದೇವಸ್ಥಾನಕ್ಕೆ ಬರುವಂತಾಗಬೇಕು. ಈ ಬಾರಿ ನಾಗಲೋಕದ ಸೆಟ್ ಹಾಕಿಸಿದ್ದೇವೆ. ಜನವರಿ 3ರ ತನಕ‌‌ ಇದು ನೋಡಲು ಲಭ್ಯವಿರುತ್ತದೆ. ಎಲ್ಲರೂ ಬನ್ನಿ ಎಂದು ರವಿಶಂಕರ್ ಆಹ್ವಾನಿಸಿದರು.

ನಿರ್ದೇಶಕ ಲಕ್ಕಿ ಶಂಕರ್ ಮಾತನಾಡಿ, ನಾವು ಕಮರ್ಷಿಯಲ್ ಸಿನಿಮಾ ಮಾಡುವ ರೀತಿಯ ಬೇರೆ. ಇದೇ ಬೇರೆ. ತಾಯಿಯ ಕುರಿತಾದ ಐದು ನಿಮಿಷಗಳ ಈ ಕಿರುಚಿತ್ರ ವೀಕ್ಷಿಸಿದವರು ಮನಸಾರೆ ಹರಸಿ ಹೋಗುತ್ತಿದ್ದಾರೆ. ನನಗೆ ಇದಕ್ಕಿಂತ ಇನೇನು ಬೇಕು. ಇದು ನನ್ನ ಪುಣ್ಯ ಎಂದು ಹರ್ಷ ವ್ಯಕ್ತಪಡಿಸಿದರು.

ನಟಿ ನಿಮಿಕಾ ರತ್ನಾಕರ್

ಇನ್ನು ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವ ನಿಮಿಕಾ ರತ್ನಾಕರ್ ಮಾತನಾಡಿ, ವಾಸವಿ ಮಾತೆಯ ಪಾತ್ರದಲ್ಲಿ ಅಭಿನಯಿಸಿರುವುದು ನನ್ನ ಬಹುಜನ್ಮಗಳ ಪುಣ್ಯ. ಈ ಕಿರುಚಿತ್ರ ನೋಡಿದ‌ ಪ್ರತಿಯೊಬ್ಬರೂ ಮೆಚ್ಚಿಗೆ ಸೂಚಿಸುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಚಿತ್ರಮಂದಿರಗಳಲ್ಲಿ ಶಿವಣ್ಣನ 125ನೇ ಚಿತ್ರದ ಅಬ್ಬರ: 'ವೇದ' ಕಲೆಕ್ಷನ್ ಎಷ್ಟು ಗೊತ್ತಾ?​​

ಸಿನಿಮಾ ಕಲಾ ನಿರ್ದೇಶಕ ವಸಂತ ಎಂ‌‌‌.ಕುಲಕರ್ಣಿ ಈ ಅದ್ಭುತ ನಾಗಲೋಕ ಸೃಷ್ಟಿಸಲು ಒಂದು ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ‌. ಐವತ್ತಕ್ಕೂ ಅಧಿಕ ಕಲಾವಿದರು ಇದಕ್ಕಾಗಿ ಕೆಲಸ ಮಾಡಿದ್ದಾರೆ. ಹಾಗೆಯೇ ನಟ ಪ್ರಸನ್ನ ಕುಮಾರ್ ಈ ಚಿತ್ರದಲ್ಲಿ ರಾಕ್ಷಸನ ಪಾತ್ರ ಮಾಡಿದ್ದಾರೆ. ಡಿಸೆಂಬರ್ 16ರಿಂದ ಬ್ರಹ್ಮೋತ್ಸವ ಆರಂಭವಾಗಿದ್ದು ಜನವರಿ 3ರ ವರೆಗೆ ನಡೆಯಲಿದೆ. ಈ ಕಿರು ಚಲನಚಿತ್ರ ದೇವಸ್ಥಾನ ತೆರೆದಿರುವ ಸಮಯದಲ್ಲಿ ಪ್ರೊಜೆಕ್ಟರ್ ಮೂಲಕ ಪ್ರಸಾರವಾಗುತ್ತಲೇ ಇರುತ್ತದೆ.

ಚಿತ್ರತಂಡ, ಮಲ್ಲೇಶ್ವರಂ ಆರ್ಯವೈಶ್ಯ ಸಂಘದ ಅಧ್ಯಕ್ಷ ಗೋವಿಂದರಾಜು ಸೇರಿದಂತೆ ಅನೇಕ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮಾಹಿತಿ ಹಂಚಿಕೊಂಡರು.

ABOUT THE AUTHOR

...view details