ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ವೃತ್ತಿಜೀವನದ ಅತ್ಯಂತ ದುಬಾರಿ ಪ್ರಾಜೆಕ್ಟ್ ಎಂದೇ ಪರಿಗಣಿಸಲ್ಪಟ್ಟಿರುವ ಸಿನಿಮಾ 'ತಾಂಡೇಲ್'. ಸಹಜ ಸುಂದರಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಮೂಡಿಬರಲಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತರದಲ್ಲಿದೆ. ಮೀನುಗಾರರ ಜೀವನವನ್ನು ಆಧರಿಸಿದ ನೈಜ ಘಟನೆ ಆಧಾರಿತ ಈ ಚಿತ್ರ ಶನಿವಾರದಂದು ಪೂಜಾ ಕಾರ್ಯಕ್ರಮದೊಂದಿಗೆ ಅದ್ಧೂರಿಯಾಗಿ ಸೆಟ್ಟೇರಿದೆ.
ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ನಾಗಾರ್ಜುನ, ವೆಂಕಟೇಶ್, ಸಾಯಿ ಪಲ್ಲವಿ, ಅಲ್ಲು ಅರವಿಂದ್ ಸೇರಿದಂತೆ ಚಿತ್ರತಂಡ ಭಾಗವಹಿಸಿತ್ತು. ಪ್ರಸ್ತುತ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿವೆ. ಮತ್ತೊಂದೆಡೆ, ಸಿನಿಮಾಗೆ ಸ್ಮಾಲ್ ಬ್ರೇಕ್ ಕೊಟ್ಟಿದ್ದ ಸಾಯಿ ಪಲ್ಲವಿ ಸುಮಾರು ಎರಡು ವರ್ಷಗಳ ನಂತರ ರೀ ಎಂಟ್ರಿ ಆಗಿದ್ದಾರೆ. ಈ ಹಿಂದೆ 'ಲವ್ ಸ್ಟೋರಿ' ಸಿನಿಮಾದಲ್ಲಿ ಅವರು ನಾಗ ಚೈತನ್ಯ ಜೊತೆ ನಟಿಸಿದ್ದರು. ಈ ಚಿತ್ರವು ಉತ್ತಮ ಟಾಕ್ ಪಡೆಯುವುದರ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿತ್ತು. ಇದೀಗ 'ತಾಂಡೇಲ್'ನಲ್ಲಿ ಈ ಜೋಡಿ ತೆರೆ ಹಂಚಿಕೊಳ್ಳಲಿದ್ದಾರೆ.
'ಕಾರ್ತಿಕೇಯ 2' ನಂತಹ ಬ್ಲಾಕ್ ಬಸ್ಟರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾವನ್ನು ನೀಡಿರುವ ಚಂದೂ ಮೊಂಡೇಟಿ ಅವರು ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈವರೆಗೆ ಚಿತ್ರಕ್ಕೆ NC23 ಎಂದು ತಾತ್ಕಾಲಿಕ ಟೈಟಲ್ ಇಡಲಾಗಿತ್ತು. ನವೆಂಬರ್ 23ರಂದು ನಾಗ ಚೈತನ್ಯ ಹುಟ್ಟುಹಬ್ಬದಂದು 'ತಾಂಡೇಲ್' ಎಂದು ಶೀರ್ಷಿಕೆ ಇಡಲಾಯಿತು. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಬನ್ನಿ ವಾಸ್ ಗೀತಾ ಆರ್ಟ್ಸ್ ಬ್ಯಾನರ್ ಅಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಟಾಲಿವುಡ್ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ನಾಗ ಚೈತನ್ಯ ಮತ್ತು ಚಂದು ಮೊಂಡೇಟಿ ಕಾಂಬೋದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಇದಕ್ಕೂ ಮುನ್ನ 'ಪ್ರೇಮಂ' ಮತ್ತು 'ಸವ್ಯಸಾಚಿ' ಚಿತ್ರಗಳು ತೆರೆ ಕಂಡಿದ್ದವು. ಅದರಲ್ಲಿ 'ಪ್ರೇಮಂ' ಬ್ಲಾಕ್ಬಸ್ಟರ್ ಆಗುವುದರ ಜೊತೆಗೆ 'ಸವ್ಯಸಾಚಿ' ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು. 'ತಾಂಡೇಲ್' ಮೀನುಗಾರರ ಜೀವನವನ್ನು ಆಧರಿಸಿದ ನೈಜ ಘಟನಾಧಾರಿತ ಚಿತ್ರ. ಚಿತ್ರದಲ್ಲಿ ನಾಗ ಚೈತನ್ಯ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೆ ತಕ್ಕಂತೆ ತಮ್ಮನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಗಡ್ಡ, ಕೂದಲು ಬಿಟ್ಟಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ:ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ ನಟ ನಾಗ ಚೈತನ್ಯ; ಮೊದಲ ವಿಡಿಯೋದಲ್ಲೇನಿದೆ?