ಟಾಲಿವುಡ್ ಹೀರೋ ನಾಗ ಚೈತನ್ಯ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ತಂಡೆಲ್'. ಚಂದೂ ಮೊಂಡೇಟಿ ನಿರ್ದೇಶನದ ಈ ಚಿತ್ರದಲ್ಲಿ ನಾಗ ಚೈತನ್ಯ ಜೊತೆ ಸರಳ ಸುಂದರಿ ಸಾಯಿ ಪಲ್ಲವಿ ತೆರೆ ಹಂಚಿಕೊಂಡಿದ್ದಾರೆ. 2016ರ ಹಿಟ್ ಚಿತ್ರ ಪ್ರೇಮಂ ಮತ್ತು 2018ರ ಸವ್ಯಸಾಚಿ ಸಿನಿಮಾ ನಂತರ ಚಂದೂ ಮೊಂಡೇಟಿ ಮತ್ತು ನಾಗ ಚೈತನ್ಯ ಕಾಂಬಿನೇಶನ್ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದು. ಇಂದು ಚಿತ್ರನಿರ್ಮಾಪಕರು ಫಸ್ಟ್ ಗ್ಲಿಂಪ್ಸ್ / ಟೀಸರ್ ಅನಾವರಣಗೊಳಿಸಿ, ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದಾರೆ.
ತಂಡೆಲ್ ಫಸ್ಟ್ ಗ್ಲಿಂಪ್ಸ್:ಎರಡು ನಿಮಿಷ ಮತ್ತು ಹನ್ನೊಂದು ಸೆಕೆಂಡ್ ಅವಧಿಯ 'ತಂಡೆಲ್' ಫಸ್ಟ್ ಗ್ಲಿಂಪ್ಸ್ ಬಹಳ ಕುತೂಹಲಕಾರಿಯಾಗಿದೆ. ಸಮುದ್ರದ ನಡುವೆ ಇರುವ ಹಡಗಿನ ದೃಶ್ಯದೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ಮೀನುಗಾರನಾಗಿ ನಾಗ ಚೈತನ್ಯ ಕಾಣಿಸಿಕೊಂಡಿದ್ದಾರೆ. ನಾಗ ಚೈತನ್ಯ ಸೇರಿ 22 ಜನರು ಪಾಕಿಸ್ತಾನದ ಕರಾಚಿ ಸೆಂಟ್ರಲ್ ಜೈಲಿನಲ್ಲಿರುವ ದೃಶ್ಯ ಈ ಟೀಸರ್ನಲ್ಲಿದೆ. ಅಲ್ಲಿನ ಅಧಿಕಾರಿಯ ವಿಚಾರಣೆಗೊಳಗಾದ ನಟ ದೃಢವಾಗಿ ತಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸಿದ್ದದ್ದಾರೆ. ನಟನ ಡೈಲಾಗ್ಗಳು ರೋಮಾಂಚನಕಾರಿಯಾಗಿವೆ.
ನಾಗ ಚೈತನ್ಯ ಪಾಕಿಸ್ತಾನಿ ಜೈಲಿನಲ್ಲಿ "ಭಾರತ್ ಮಾತಾ ಕಿ ಜೈ" ಎಂಬ ಘೋಷಣೆ ಕೂಗಿದಾಗ ದೃಶ್ಯದ ತೀವ್ರತೆ ಉತ್ತುಂಗಕ್ಕೇರುತ್ತದೆ. ನಂತರ, ನಟಿ ಸಾಯಿ ಪಲ್ಲವಿಯ ಪರಿಚಯದೊಂದಿಗೆ ಟೀಸರ್ ಪೂರ್ಣಗೊಂಡಿದೆ. ನಾಗ ಚೈತನ್ಯ ಅವರ ಪುನರಾಗಮನದ ಬಗ್ಗೆ ನಟಿಯ ನಿರೀಕ್ಷೆ, ಶೀಘ್ರದಲ್ಲೇ ಹಿಂತಿರುಗುವ ಭರವಸೆಯನ್ನು ಕೊನೆಯ ದೃಶ್ಯ ಕೊಟ್ಟಿದೆ.