ಕರ್ನಾಟಕ

karnataka

ಪ್ರಾಸ್ಟೇಟ್ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಗಾಯಕ ಉಸ್ತಾದ್ ರಶೀದ್ ಖಾನ್ ನಿಧನ

By ETV Bharat Karnataka Team

Published : Jan 9, 2024, 6:56 PM IST

Updated : Jan 9, 2024, 8:02 PM IST

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕ ಉಸ್ತಾದ್ ರಶೀದ್ ಖಾನ್ ಅವರು ಇಂದು (ಮಂಗಳವಾರ) ಮಧ್ಯಾಹ್ನ ನಿಧನರಾಗಿದ್ದಾರೆ.

ಗಾಯಕ ಉಸ್ತಾದ್ ರಶೀದ್ ಖಾನ್ ನಿಧನ
ಗಾಯಕ ಉಸ್ತಾದ್ ರಶೀದ್ ಖಾನ್ ನಿಧನ

ಕೋಲ್ಕತ್ತಾ (ಪಶ್ಚಿಮ ಬಂಗಾಳ):ದೀರ್ಘಕಾಲದ ಅನಾರೋಗ್ಯದ ಬಳಲುತ್ತಿದ್ದ ಗಾಯಕ ಉಸ್ತಾದ್ ರಶೀದ್ ಖಾನ್ ಮಂಗಳವಾರ ಮಧ್ಯಾಹ್ನ 3.45ರ ಸುಮಾರಿಗೆ ನಗರದ ಆಸ್ಪತ್ರೆಯಲ್ಲಿ ನಿಧನರಾದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೇಯರ್ ಫಿರ್ಹಾದ್ ಹಕೀಂ ಅವರು ಪೀರ್‌ಲೆಸ್ ಆಸ್ಪತ್ರೆಗೆ ಆಗಮಿಸಿದ್ದು, ಮುಖ್ಯಮಂತ್ರಿಗಳೇ, ರಶೀದ್ ಖಾನ್ ನಿಧನ ಸುದ್ದಿ ಪ್ರಕಟಿಸಿದ್ದಾರೆ.

ಖ್ಯಾತ ಕಲಾವಿದ ಮಂಗಳವಾರ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಆರೋಗ್ಯದ ಸ್ಥಿತಿ ಕ್ರಮೇಣ ಹದಗೆಡುತ್ತಿತ್ತು. ಅವರನ್ನು ವೆಂಟಿಲೇಟರ್​ನಲ್ಲಿ ಇರಿಸುವುದರ ಜೊತೆಗೆ, ಅವರಿಗೆ ಟ್ಯೂಬ್​ನ ಮೂಲಕ ಆಹಾರ ನೀಡಲಾಗುತ್ತಿತ್ತು ಎನ್ನುವ ಬಗ್ಗೆ ವರದಿಯಾಗಿದೆ. ವೈದ್ಯ ಸುದೀಪ್ತ ಮಿತ್ರ ನೇತೃತ್ವದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ, ಮೆಡಿಸಿನ್ ಮತ್ತು ಕ್ಯಾನ್ಸರ್ ವಿಭಾಗದ ವೈದ್ಯರ ತಂಡವು ಅವರ ಮೇಲೆ ನಿರಂತರವಾಗಿ ನಿಗಾ ಇರಿಸಿತ್ತು.

ಸಂಗೀತ ಕಲಾವಿದ ದೀರ್ಘಕಾಲದವರೆಗೆ ಪ್ರಾಸ್ಟೇಟ್ ಕ್ಯಾನ್ಸರ್​ ರೋಗಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮಿದುಳಿನಲ್ಲಿ ಅಧಿಕ ರಕ್ತಸ್ರಾವವಾಗಿ ನ.21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಸಂಗೀತಗಾರ ರಶೀದ್ ಖಾನ್ ಅವರು 55 ನೇ ವಯಸ್ಸಿನಲ್ಲಿ ನಿಧನರಾದರು.

ಪ್ರಾಸ್ಟೇಟ್ ಕ್ಯಾನ್ಸರ್​ನಿಂದ ಗಾಯಕ ಉಸ್ತಾದ್ ರಶೀದ್ ಖಾನ್ ನಿಧನ

ಬೆಳ್ಳಿ ಪರದೆ ಮೇಲೆ ಉಸ್ತಾದ್ ರಶೀದ್ ಖಾನ್:2004ರಲ್ಲಿ, ಸಂಗೀತ ಕಲಾವಿದ, ಗಾಯಕ ಬೆಳ್ಳಿ ಪರದೆಯ ಜಗತ್ತನ್ನು ಪ್ರವೇಶಿಸಿದರು. ಇಸ್ಮಾಯಿಲ್ ದರ್ಬಾರ್ ಅವರ ಸಂಗೀತ ನಿರ್ದೇಶನದಲ್ಲಿ ಕಿಸ್ನಾ: ದಿ ವಾರಿಯರ್ ಪೊಯೆಟ್ ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡುವ ಅವಕಾಶವನ್ನು ರಶೀದ್ ಖಾನ್ ಪಡೆದರು. ಆದರೆ, ಸಂದೇಶ್ ಶಾಂಡಿಲ್ಯ ಸಂಗೀತ ಸಂಯೋಜನೆಯ 'ಜಬ್ ವಿ ಮೆಟ್' ಚಿತ್ರದ 'ಆಯೋಗೆ ಜಬ್ ತುಮ್ ಸಜ್ನಾ' ಹಾಡಿನ ಮೂಲಕ ಲಕ್ಷಾಂತರ ಹೃದಯಗಳನ್ನು ಗೆದ್ದರು.

ಅದರ ನಂತರ, ರಶೀದ್ ಖಾನ್ ಬಂಗಾಳಿ ಚಲನಚಿತ್ರಗಳು ಮತ್ತು ಹಲವಾರು ಹಿಂದಿ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡುವ ಮೂಲಕ ಪ್ರಶಂಸೆಯನ್ನು ಗಳಿಸಿದ್ದರು. ಈ ಪಟ್ಟಿಯಲ್ಲಿ 'ಮೈ ನೇಮ್ ಈಸ್ ಖಾನ್', 'ರಾಜ್ 3', 'ಬಾಪಿ ಬರಿ ಜಾ', 'ಕಾದಂಬರಿ', 'ಶಾದಿ ಮೇ ಜರೂರ್ ಅನಾ', 'ಮಂಟೋ' ಚಿತ್ರಗಳು ಸೇರಿವೆ. ‘ಮಿತಿನ ಮಸಿ’ಯಂತಹ ಚಿತ್ರಗೀತೆಗಳಿಗೆ ಧ್ವನಿ ನೀಡಿದ್ದರು.

ರಶೀದ್ ಖಾನ್​ ಸಾಧನೆಗೆ ಸಂದ ಪ್ರಶಸ್ತಿಗಳು:ರಶೀದ್ ಖಾನ್ ಅವರಿಗೆ 2006ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನಂತರ 2012 ರಲ್ಲಿ ಅವರಿಗೆ ಬಂಗಭೂಷಣ ಪ್ರಶಸ್ತಿ ಅವರಿಗೆ ಲಭಿಸಿತ್ತು. ಉಸ್ತಾದ್ ರಶೀದ್ ಖಾನ್ ಅವರಿಗೆ 2022ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಉಸ್ತಾದ್ ರಶೀದ್ ಖಾನ್ ನಿಧನದಿಂದ ಸಂಗೀತ ಲೋಕದಲ್ಲಿ ಮೌನ ಆವರಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಉಸ್ತಾದ್ ರಶೀದ್ ಖಾನ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ರಾಮಮಂದಿರ ಕಾರ್ಯಕ್ರಮ: ಧನುಷ್​, ಜಾಕಿ ಶ್ರಾಫ್​ ಸೇರಿ ಸೆಲೆಬ್ರಿಟಿಗಳಿಗೆ ಆಹ್ವಾನ

Last Updated : Jan 9, 2024, 8:02 PM IST

ABOUT THE AUTHOR

...view details