ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ 'ಸಲಾರ್' ಸಿನಿ ಪ್ರೇಮಿಗಳ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಸಿನಿಮಾಗೆ 'ಕೆಜಿಎಫ್' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ ಈ ಅದ್ಧೂರಿ ಆ್ಯಕ್ಷನ್ ಎಂಟರ್ಟೈನ್ಮೆಂಟ್ ಸಿನಿಮಾ ಪ್ರಶಾಂತ್ ನೀಲ್ ಅವರ ಹಿಂದಿನ 'ಉಗ್ರಂ' ಸಿನಿಮಾದ ರಿಮೇಕ್ ಎಂದು ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದ್ದಾರೆ. ಸದ್ಯ ಅವರು ಮಾತನಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸ್ಟಾರ್ ಹೀರೋಗಳ ಸಿನಿಮಾ ಪ್ರಭಾವ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟರ ಮಟ್ಟಿಗೆ ಇರುತ್ತದೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಕೆಲವು ವದಂತಿಗಳು ಕ್ಷಣಮಾತ್ರದಲ್ಲೇ ವೈರಲ್ ಆಗಿಬಿಡುತ್ತದೆ. ಡಿಸೆಂಬರ್ 22 ರಂದು ಸಲಾರ್ ಬಿಡುಗಡೆ ದಿನಾಂಕ ಘೋಷಿಸಿದ ದಿನದಿಂದ ಸಿನಿಮಾ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಸಿನಿಮಾಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿಚಾರವೂ ಇಂಟರ್ನೆಟ್ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಈ ಅನುಕ್ರಮದಲ್ಲಿ ನೋಡುವುದಾದರೆ, ರವಿ ಬಸ್ರೂರು 'ಸಲಾರ್' ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
'ಸಲಾರ್' ನಿರ್ದೇಶಕ ಪ್ರಶಾಂತ್ ನೀಲ್ ಅವರ ಸೂಪರ್ ಹಿಟ್ ಚಿತ್ರ 'ಉಗ್ರಂ' ರಿಮೇಕ್ ಆಗಿದೆ ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದ್ದಾರೆ. ಈ ವಿಚಾರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಆದರೆ, ಈ ಮೊದಲು ಬಿಡುಗಡೆಯಾಗಿದ್ದ 'ಸಲಾರ್' ಟೀಸರ್ ನೋಡಿದರೆ, 'ಉಗ್ರಂ'ನಂತೆ ಕಾಣಿಸುತ್ತಿಲ್ಲ. ಟೀಸರ್ ಬಿಡುಗಡೆಯಾದಾಗ 'ಕೆಜಿಎಫ್'ನಂತಿವೆ ದೃಶ್ಯಗಳು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ರವಿ ಅವರು ಹೇಳುವಂತೆ ಕನ್ನಡದ 'ಉಗ್ರಂ' ಸಿನಿಮಾವನ್ನು 'ಸಲಾರ್' ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:'ಯುವ' ಬಿಡುಗಡೆಯಾಗಬೇಕಿದ್ದ ದಿನ 'ಸಲಾರ್' ರಿಲೀಸ್... ಹೊಂಬಾಳೆ ಫಿಲ್ಮ್ಸ್ ವಿರುದ್ಧ ಬೇಸರಿಸಿಕೊಂಡರಾ ಸಿನಿಪ್ರಿಯರು?!