ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಂಥ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿವೆ. ಆ ನಂತರ ಆ ಶೈಲಿಯ ಸಿನಿಮಾಗಳು ಬಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸದ್ದು ಮಾಡಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಡೇರ್ ಡೆವಿಲ್ ಮುಸ್ತಫಾದಂಥ ಕಾಲೇಜು ಕೇಂದ್ರಿತ ಕಥೆಗಳು ಸೂಪರ್ ಹಿಟ್ ಆಗುವಲ್ಲಿ ಯಶ ಕಂಡಿವೆ. ಕಾಲೇಜು ಕೇಂದ್ರಿತ ಬಗೆಯ ಸಿನಿಮಾಗಳ ಕೊರತೆ ಒಂದು ಮಟ್ಟಿಗೆ ನೀಗಿದಂತಾಗಿದೆ. ಈ ಸಾಲಿಗೆ ಮತ್ತೊಂದು ಸಿನಿಮಾ ಶೀಘ್ರದಲ್ಲೇ ಸೇರ್ಪಡೆ ಆಗಲಿದೆ. ದೊಡ್ಡ ಗೆಲುವು ಸಾಧಿಸುವ ಉದ್ದೇಶದೊಂದಿಗೆ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅಂಡ್ ಟೀಮ್ ಗಾಂಧಿ ನಗರಕ್ಕೆ ಎಂಟ್ರಿ ಕೊಟ್ಟಿದೆ.
''ವಿದ್ಯಾರ್ಥಿ ವಿದ್ಯಾರ್ಥಿನಿಯರೇ''ಚಿತ್ರದ ಶೀರ್ಷಿಕೆ. ಯುವ ನಿರ್ದೇಶಕ ಅರುಣ್ ಅಮುಕ್ತ ಸಾರಥ್ಯದಲ್ಲಿ ಈ ತಂಡ ಶೂಟಿಂಗ್ ಅಖಾಡಕ್ಕಿಳಿದಿದೆ. ಈಗಾಗಲೇ ಚಂದನ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಹೊಸ ಸಿನಿಮಾದಲ್ಲಿ ಅಮರ್, ಭಾವನಾ, ಮಾನಸಿ, ವಿವಾನ್ ಎಂಬ ಯುವ ಪ್ರತಿಭೆಗಳ ಜೊತೆ ವಿದ್ಯಾರ್ಥಿಯಾಗಿದ್ದಾರೆ. ಇತ್ತೀಚೆಗೆ ಕಾಲೇಜ್ ವಿದ್ಯಾರ್ಥಿಗಳಿಂದ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಟೈಟಲ್ ಅನಾವರಣಗೊಳಿಸುವ ಮೂಲಕ ಚಿತ್ರತಂಡ ಸಂಭ್ರಮಿಸಿದೆ. ಇದೊಂದು ಕಾಲೇಜು ವಾತಾವರಣದಲ್ಲಿ ನಡೆಯುವ ವಿದ್ಯಾರ್ಥಿಗಳ ಕಥೆಯಾಗಿದೆ.
ಯುವ ನಿರ್ದೇಶಕ ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಈ ಹಿಂದೆ ಶ್ರೀಮುರುಳಿ ನಾಯಕನಾಗಿ ನಟಿಸಿದ್ದ 'ಲೂಸ್ಗಳು' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಅವರೀಗ ಸದ್ಯದ ಟ್ರೆಂಡ್ಗೆ ತಕ್ಕಂತೆ ಹೊಸ ಬಗೆಯ ಕಥಾನಕದೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ರೂಪಿಸಲು ಮುಂದಾಗಿದ್ದಾರೆ. ಶೀರ್ಷಿಕೆ ಅನಾವರಣ ವಿಚಾರದಲ್ಲಿಯೇ ಚಿತ್ರತಂಡ ಒಂದಷ್ಟು ಕ್ರಿಯಾಶೀಲ ನಡೆಯನ್ನು ಅನುಸರಿಸಿದೆ. ರಾಜ್ಯದ ನಾನಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸ್ವತಃ ಈ ಶೀರ್ಷಿಕೆ ಬಿಡುಗಡೆಗೊಳಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಅದನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಕಾಲೇಜು ಕಥೆಯ ಸಿನಿಮಾಗಳ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವಂಥ ಅನೇಕ ಅಂಶಗಳು ಈ ಚಿತ್ರದಲ್ಲಿರಲಿವೆ ಎಂಬುದು ಚಿತ್ರತಂಡದ ಮಾತು.