ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರು, ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದಾರೆ. ಈ ಸಾಲಿಗೀಗ ಬಹುಬೇಡಿಕೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹೊಸ ಸೇರ್ಪಡೆ. ಹೌದು, ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಈಗ ನಿರ್ಮಾಪಕರಾಗಿದ್ದಾರೆ. abbs studios ಸಂಸ್ಥೆಯ ಮೊದಲ ಚಿತ್ರವಾಗಿ "ಜಸ್ಟ್ ಮ್ಯಾರೀಡ್" ನಿರ್ಮಾಣಗೊಳ್ಳುತ್ತಿದೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ.
ಸಿ.ಆರ್ ಬಾಬಿ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿ ಸೇರ್ಪಡೆಯಾಗಿದ್ದಾರೆ. ಗಣೇಶ ಚತುರ್ಥಿ ಶುಭ ಸಂದರ್ಭದಲ್ಲಿ ಜಸ್ಟ್ ಮ್ಯಾರಿಡ್ ಚಿತ್ರದ "ಗಂ ಗಣೇಶಾಯ ನಮಃ" ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆ ಆಗಿದೆ. ಶಶಿ ಕಾವೂರ್ ಬರೆದಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವರುಣ್ ರಾಮಚಂದ್ರ, ಮಧ್ವೇಶ್ ಭಾರದ್ವಾಜ್, ಅಭಿಷೇಕ್ ಹಾಗೂ ವಿಶಾಖ್ ಹಾಡಿದ್ದಾರೆ. ಗಣಪತಿ ಕುರಿತಾದ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಿ.ಆರ್ ಬಾಬಿ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿ, ಸಂಗೀತ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಸಿ.ಆರ್.ಬಾಬಿ, ಇದೀಗ ನಿರ್ದೇಶಕಿಯಾಗಿ ಹೊರಹೊಮ್ಮಿದ್ದಾರೆ.