ಮುಂಬೈ:ರಸ್ತೆ ನಿಯಮಗಳನ್ನು ಮೀರಿದ 'ಬಾಲಿವುಡ್ ದೂದ್ಪೇಡಾ' ನಟ ಕಾರ್ತಿಕ್ ಆರ್ಯನ್ ಅವರ ಒಡೆತನದ ಕಾರಿಗೆ ಮುಂಬೈ ಪೊಲೀಸರು ದಂಡ ವಿಧಿಸಿದ್ದಾರೆ. ನಟ ತಮ್ಮ ಶೆಹಜಾದ ಚಿತ್ರದ ಯಶಸ್ಸಿಗಾಗಿ ಆಶೀರ್ವಾದ ಪಡೆಯಲು ಇಲ್ಲಿನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತಪ್ಪಾದ ಜಾಗದಲ್ಲಿ ಕಾರು ಪಾರ್ಕಿಂಗ್ ಮಾಡಿದ್ದು, ನಿಯಮ ಉಲ್ಲಂಘನೆಯಡಿ ದಂಡ ಹಾಕಲಾಗಿದೆ.
ಇದನ್ನು ಮುಂಬೈ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾರ್ತಿಕ್ ಅವರ ಲಂಬೋರ್ಗಿನಿ ಕಾರಿನ ಚಿತ್ರದ ಸಹಿತ ಹಂಚಿಕೊಂಡಿದ್ದು, ಇದು ಸಮಸ್ಯೆ. ಕಾರನ್ನು ರಾಂಗ್ ಸೈಡ್ನಲ್ಲಿ ನಿಲ್ಲಿಸಲಾಗಿದೆ. ಶೆಹಜಾದಾಸ್ಗೆ ಇದು ತಕ್ಕುದಲ್ಲ ಎಂದು ಬರೆದುಕೊಂಡಿದ್ದಾರೆ.
'ಶೆಹಜಾದ' ಯಶಸ್ವಿ ಪ್ರದರ್ಶನ ಕಾಣಲಿ ಎಂದು ಪ್ರಾರ್ಥಿಸಲು ಕಾರ್ತಿಕ್ ಅವರು ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ನೋ ಪಾರ್ಕಿಂಗ್ ವಲಯದಲ್ಲಿ ಕಾರು ನಿಲ್ಲಿಸಿ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಪೊಲೀಸರು ಎಷ್ಟು ಪ್ರಮಾಣದ ದಂಡ ವಿಧಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಮುಂಬೈ ರಸ್ತೆ ಸಂಚಾರಿ ಪೊಲೀಸರು ನಟನ ವಾಹನದ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಅದರ ನಂಬರ್ ಪ್ಲೇಟ್ ಮಸುಕುಗೊಳಿಸಲಾಗಿದೆ. ಇದರ ಹೊರತಾಗಿಯೂ ವಾಹನದ ನಂಬರ್ ಪ್ಲೇಟ್ ಗೋಚರಿಸುತ್ತದೆ. ನಟನ ಹೆಸರನ್ನು ಎಲ್ಲಿಯೂ ಬಳಸದೇ ಆತನ ಸಿನಿಮಾಗಳನ್ನೇ ಪೋಣಿಸಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ನಟ, ಗಣ್ಯ ವ್ಯಕ್ತಿಗಳು ಯಾರೇ ಆಗಿದ್ದರೂ ವಾಹನ ನೋ ಪಾರ್ಕಿಂಗ್ನಲ್ಲಿದ್ದರೆ ಅಂಥವರಿಗೆ ಪೊಲೀಸರು ದಂಡ ಪ್ರಯೋಗ ಮಾಡುತ್ತಾರೆ. ನಟನ ಕಾರು ಕೂಡ ನಿಯಮಬಾಹಿರವಾಗಿ ನಿಲ್ಲಿಸಲಾಗಿದೆ. ಹೀಗಾಗಿ ಪೊಲೀಸರು ತಮ್ಮ ಕೆಲಸವನ್ನು ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಶುಕ್ರವಾರ ಬಿಡುಗಡೆಯಾಗಿರುವ ಶಹಜಾದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ತೆಲುಗಿನ ಅಲ್ಲು ಅರ್ಜುನ್, ಪೂಜಾ ಹೆಗಡೆ ನಟನೆಯ ಅಲಾ ವೈಕುಂಟಪುರಂ ಸಿನಿಮಾದ ರಮೇಕ್ ಆಗಿದೆ. ರೋಹಿತ್ ಧವನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕೃತಿ ಸನೂನ್, ರೋನಿತ್ ರಾಯ್, ಮೋನಿಶಾ, ಸನ್ನಿ ಹಿಂದುಜಾ ಸೇರಿದಂತೆ ಹಲವು ನಟ-ನಟಿಯರಿದ್ದಾರೆ.
ರಸ್ತೆಯಲ್ಲಿ ಡ್ಯಾನ್ಸ್, ಯುವತಿಗೆ ದಂಡ:ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಯುವತಿಯೊಬ್ಬಳು ರಸ್ತೆಯಲ್ಲಿ ಡ್ಯಾನ್ಸ್ ಮಾಡಿರುವುದರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂಚಾರ ಪೊಲೀಸರು ಆಕೆಗೆ 17 ಸಾವಿರ ದಂಡ ವಿಧಿಸಿದ್ದರು. ದೆಹಲಿಯಿಂದ ರಾಜ್ ನಗರ ವಿಸ್ತರಣೆಗೆ ಸಂಪರ್ಕಿಸುವ ಎಲಿವೇಟೆಡ್ ರಸ್ತೆಯಲ್ಲಿ ಆಕೆ ಡ್ಯಾನ್ಸ್ ಮಾಡಿದ್ದಳು. ಎಲಿವೇಟೆಡ್ ರಸ್ತೆ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಈ ಮಧ್ಯೆಯೂ ಯುವತಿ ರೀಲ್ಸ್ ಮಾಡಲು ವಿಡಿಯೋ ಮಾಡಿದ್ದಾಳೆ. ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇಂತಹ ಪ್ರಕರಣಗಳ ವಿರುದ್ಧ ಅನೇಕ ಬಾರಿ ಕ್ರಮ ಕೈಗೊಂಡರೂ ಸಹ ಜನರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಲಿವೇಟೆಡ್ ರಸ್ತೆಯಲ್ಲಿ ಜನರು ಇಂತಹ ವಿವೇಚನಾರಹಿತ ವರ್ತನೆ ತೋರಬಾರದು ಎಂದು ಸಂಚಾರಿ ಠಾಣೆಯ ಪೊಲೀಸರು ಅನೇಕ ಬಾರಿ ಸಲಹೆ ನೀಡಿದ್ದಾರೆ. ಏಕೆಂದರೆ ಇಲ್ಲಿ ಸಂಚಾರ ಅತ್ಯಂತ ವೇಗವಾಗಿ ಇರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಆದರೆ ಜನರು ಛಾಯಾಚಿತ್ರಗಳನ್ನು ತೆಗೆಯುವಾಗ ತಮ್ಮ ಪ್ರಾಣ ಮಾತ್ರವಲ್ಲದೇ ಇತರರ ಪ್ರಾಣವನ್ನೂ ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಿಯಾಯಿತಿಯಲ್ಲಿ ಸಂಚಾರಿ ದಂಡ ಪಾವತಿಗೆ ಇಂದು ಅಂತಿಮ ದಿನ: ಭರ್ಜರಿ ದಂಡ ಸಂಗ್ರಹಣೆ ನಿರೀಕ್ಷೆ