ಕರ್ನಾಟಕ

karnataka

ETV Bharat / entertainment

ಲಾರೆನ್ಸ್ ಬಿಷ್ಣೋಯ್​ ಬೆದರಿಕೆ: ಸಲ್ಮಾನ್ ಖಾನ್ ಭದ್ರತೆ ಪರಿಶೀಲಿಸಿದ ಪೊಲೀಸರು! - Lawrence Bishnoi

ಲಾರೆನ್ಸ್ ಬಿಷ್ಣೋಯ್ ಹೆಸರಿನ ಸೋಷಿಯಲ್​ ಮೀಡಿಯಾ ಅಕೌಂಟ್​ ಮೂಲಕ ಬಂದ ಬೆದರಿಕೆ ಬೆನ್ನಲ್ಲೇ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಅವರ ಭದ್ರತೆ ಪರಿಶೀಲಿಸಿದ್ದಾರೆ.

Salman Khan security
ಸಲ್ಮಾನ್ ಖಾನ್ ಭದ್ರತೆ

By ETV Bharat Karnataka Team

Published : Nov 29, 2023, 6:59 PM IST

Updated : Nov 29, 2023, 7:23 PM IST

ಬಾಲಿವುಡ್​ ಸೂಪರ್​​ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗಷ್ಟೇ ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್​ನಿಂದ ಮತ್ತೊಂದು ಬೆದರಿಕೆ ಬಂದಿದೆ. ಬಹುಬೇಡಿಕೆ ತಾರೆಗೆ ಪದೇ ಪದೆ ಬೆದರಿಕೆಗಳು ಬರುತ್ತಿರುವ ಹಿನ್ನೆಲೆ, ಮುಂಬೈ ಪೊಲೀಸರು ಅವರ ಭದ್ರತೆ ಪರಿಶೀಲಿಸಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಬಂದಿರುವ ಹಿನ್ನೆಲೆ ಮುಂಬೈ ಪೊಲೀಸರು ನಟನ ಭದ್ರತೆಯನ್ನು ಪರಿಶೀಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಸೋಷಿಯಲ್​ ಮೀಡಿಯಾ ಅಕೌಂಟ್​​ ಒಂದರಿಂದ ನಟ ಸಲ್ಮಾನ್ ಖಾನ್‌ ಅವರಿಗೆ ಬೆದರಿಕೆ ಬಂದ ಬಳಿಕ ಈ ಬೆಳವಣಿಗೆ ನಡೆದಿದೆ. ಮುಂಬೈ ಪೊಲೀಸರು ನಟನಿಗೆ ಬಂದಿರುವ ಬೆದರಿಕೆ ಬಗ್ಗೆಯೂ ಮಾಹಿತಿ ಕೇಳಿದ್ದಾರೆ. ಸಲ್ಮಾನ್ ಖಾನ್ ಅವರಿ​​ಗೆ ಈಗಾಗಲೇ ಪೊಲೀಸರಿಂದ ವೈ+ ಭದ್ರತೆ ಸಿಕ್ಕಿದೆ.

ಇತ್ತೀಚೆಗಷ್ಟೇ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಅವರ ಕೆನಡಾದ ಬಂಗಲೆ ಮೇಲೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಇದನ್ನು ತಾನೇ ಮಾಡಿರುವುದಾಗಿ ಲಾರೆನ್ಸ್ ಬಿಷ್ಣೋಯ್ ಹೆಸರಿನ ಸೋಷಿಯಲ್​ ಮೀಡಿಯಾ ಪೋಸ್ಟ್​​​ ಹೇಳಿಕೊಂಡಿತ್ತು. ಆ ಪೋಸ್ಟ್​ನಲ್ಲಿ ಸಲ್ಮಾನ್ ಖಾನ್ ಹೆಸರನ್ನೂ ಉಲ್ಲೇಖಿಸಲಾಗಿತ್ತು. ಈ ಘಟನೆ ಜರುಗಿದ ಬೆನ್ನಲ್ಲೇ ಮುಂಬೈ ಪೊಲೀಸರು ಜನಪ್ರಿಯ ನಟನ ಭದ್ರತೆ ಪರಿಶೀಲಿಸಿದ್ದಾರೆ.

ಗಿಪ್ಪಿ ಗ್ರೆವಾಲ್ ಮನೆ ಮೇಲೆ ದಾಳಿ: ಪಂಜಾಬಿ ಗಾಯಕ-ನಟ ಗಿಪ್ಪಿ ಗ್ರೆವಾಲ್ ಅವರ ಕೆನಡಾ ನಿವಾಸದ ಮೇಲೆ ಇತ್ತೀಚೆಗೆ ಗುಂಡಿನ ದಾಳಿ ನಡೆದಿದೆ. ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿತ್ತು. ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್​ ಹೆಸರಿನ ಅಕೌಂಟ್​​​ನಿಂದ ಶೇರ್ ಆದ ಪೋಸ್ಟ್​​ನಲ್ಲಿ, ಕೆನಡಾದಲ್ಲಿರುವ ಗಿಪ್ಪಿ ಗ್ರೆವಾಲ್ ಅವರ ಮನೆ ಬಳಿ ಗುಂಡು ಹಾರಿಸಿರುವುದಾಗಿ ಬರೆದಿದ್ದಾನೆ. ಅಲ್ಲದೇ, ಸಲ್ಮಾನ್ ಖಾನ್ ಅವರ ಹೆಸರನ್ನೂ ಉಲ್ಲೇಖಿಸಿ ಎಚ್ಚರಿಸಿದ್ದಾನೆ.

ಇದನ್ನೂ ಓದಿ:ಹೃತಿಕ್ ರೋಷನ್​​​, ಜೂ. ಎನ್​​ಟಿಆರ್ ನಟನೆಯ 'ವಾರ್​ 2' ರಿಲೀಸ್​ ಡೇಟ್ ರಿವೀಲ್

ಗಿಪ್ಪಿ ಗ್ರೆವಾಲ್ ಅವರ ಬಂಗಲೆ ಕೆನಡಾದ ವ್ಯಾಂಕೋವರ್‌ನ ವೈಟ್ ರಾಕ್ ಪ್ರದೇಶದಲ್ಲಿದ್ದು, ಭಾನುವಾರ ಗುಂಡಿನ ದಾಳಿ ನಡೆದಿದೆ. ಬಂಗಲೆ ಮೇಲೆ ಮನ ಬಂದಂತೆ ಗುಂಡು ಹಾರಿಸಲಾಗಿದೆ. ಬಳಿಕ ಪೋಸ್ಟ್ ಶೇರ್ ಮಾಡಿದ್ದು, ಸಲ್ಮಾನ್ ಖಾನ್​ನನ್ನು ಅಣ್ಣನಂತೆ ಭಾವಿಸಿದ್ದೀಯ. ಹಾಗಾದರೆ ನಿನ್ನ ಅಣ್ಣ ನಿನ್ನನ್ನು ರಕ್ಷಿಸಬೇಕು. ಈ ಸಂದೇಶ ಸಲ್ಮಾನ್​​ಗೂ ಸಂಬಂಧಿಸಿದ್ದು. ದಾವೂದ್​​ ಸಹಾಯ ಪಡೆದರೂ ನಿಮ್ಮನ್ನು ನಮ್ಮಿಂದ ರಕ್ಷಿಸಲು ಸಾಧ್ಯವಿಲ್ಲ. ನೀವು ಭ್ರಮೆಯಲ್ಲಿದ್ದೀರಿ ಎಂದು ಪೋಸ್ಟ್​​ನಲ್ಲಿ ಬರೆಯಲಾಗಿತ್ತು. ಈ ಕುರಿತು ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಗಿಪ್ಪಿ ಗ್ರೆವಾಲ್, ತಾನು ಸಲ್ಮಾನ್ ಖಾನ್ ಸ್ನೇಹಿತನಲ್ಲ. ಸಲ್ಮಾನ್ ಖಾನ್ ಅವರನ್ನು ಎರಡು ಬಾರಿ ಮಾತ್ರ ಭೇಟಿಯಾಗಿದ್ದೇನೆ ಎಂದು ತಿಳಿಸಿದರು. ಇನ್ನು ಬಿಷ್ಣೋಯ್ ಪೋಸ್ಟ್​ನಲ್ಲಿ ದಿ. ಗಾಯಕ ಸಿಧು ಮೂಸೆವಾಲಾ ಅವರ ಹೆಸರು ಸಹ ಉಲ್ಲೇಖವಾಗಿತ್ತು.

ಇದನ್ನೂ ಓದಿ:ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಬಂಗಲೆ ಮೇಲೆ ಗುಂಡಿನ ದಾಳಿ: ಸಲ್ಮಾನ್​ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಎಚ್ಚರಿಕೆ

ಸಲ್ಮಾನ್​ಗೆ ವೈ+ ಭದ್ರತೆ:ನಟ ಸಲ್ಮಾನ್ ಖಾನ್ ಅವರಿಗೆ ಪೊಲೀಸರು ವೈ+ ಭದ್ರತೆ ನೀಡಿದ್ದಾರೆ. ಈ ಪ್ರಕಾರ, ಸಲ್ಮಾನ್ ಜೊತೆಗೆ ಓರ್ವ ಪೊಲೀಸ್ ಅಧಿಕಾರಿ ಮತ್ತು ನಾಲ್ವರು ಕಾನ್ಸ್​​ಟೇಬಲ್‌ಗಳು ಇರುತ್ತಾರೆ. ಇದಲ್ಲದೇ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್ಸ್ ಖಾನ್ ನಿವಾಸದ ಹೊರಗಿರುತ್ತಾರೆ. ವೈ+ ಭದ್ರತೆಯಲ್ಲಿ ನಾಲ್ಕು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಇರುತ್ತಾರೆ. ಬೆದರಿಕೆಗೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಯಾವುದೇ ದೂರು ದಾಖಲಿಸಿಲ್ಲ. ಆದರೆ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇದಕ್ಕೂ ಮೊದಲು ಮಾರ್ಚ್ ನಲ್ಲಿ ಸಲ್ಮಾನ್ ಖಾನ್ ಅವರ ಆಪ್ತ ಸಹಾಯಕನಿಗೆ ಇಮೇಲ್ ಮೂಲಕ ಬೆದರಿಕೆ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಸಹಚರ ಗೋಲ್ಡಿ ಬ್ರಾರ್ ವಿರುದ್ಧ ಪೊಲೀಸರು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Last Updated : Nov 29, 2023, 7:23 PM IST

ABOUT THE AUTHOR

...view details