ಕೆಜಿಎಫ್ 2, ಕಾಂತಾರದಂತಹ ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ಈ ವರ್ಷ ಭರ್ಜರಿ ಕಲೆಕ್ಷನ್ ಮಾಡಿರುವ ಸಿನಿಮಾ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್ ಈಗ ದಕ್ಷಿಣದ ಇತರೆ ಭಾಷೆಯ ಚಿತ್ರಗಳತ್ತ ಗಮನ ಹರಿಸಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಮುಂದಿನ ಐದು ವರ್ಷಗಳಲ್ಲಿ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ ಜೊತೆಗೆ ಚಿತ್ರರಂಗದಲ್ಲಿ 3 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಮನೋರಂಜನಾ ಉದ್ಯಮದಲ್ಲಿ 3 ಸಾವಿರ ಕೋಟಿ ರೂ ಹೂಡಿಕೆ ಮಾಡಲು ನಾವು ನಿರ್ಧರಿಸಿದ್ದೇವೆ. ಎಂಟರ್ಟೈನ್ಮೆಂಟ್ ಫೀಲ್ಡ್ ಭವಿಷ್ಯದಲ್ಲಿ ಮತ್ತಷ್ಟು ಬೆಳೆಯಲಿದೆ. ಪ್ರತಿ ವರ್ಷ ನಮ್ಮ ಬ್ಯಾನರ್ ಅಡಿಯಲ್ಲಿ ಕನಿಷ್ಠ ಐದಾರು ಚಿತ್ರಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ. ಹಿಟ್ ಸಿನಿಮಾಗಳ ಸೀಕ್ವೆಲ್ ಬರಲಿದೆ. ಸದ್ಯ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿವು ಆಸೆ ಇದೆ ಎನ್ನುತ್ತಾರೆ ವಿಜಯ್ ಕಿರಗಂದೂರ್.
'ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದ ಕಥೆಗಳನ್ನು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಪರಿಚಯಿಸಲು ನಾವು ಬಯಸುತ್ತೇವೆ. ಮುಂದಿನ ಪೀಳಿಗೆಗೆ ಅವುಗಳನ್ನು ರವಾನಿಸುವುದು ನಮ್ಮ ಗುರಿ. ಹಿಂದಿ ಭಾಷೆಯಲ್ಲೂ ಸಿನಿಮಾ ಮಾಡುತ್ತೇವೆ. ಸದ್ಯ ನಾವು ಇಬ್ಬರು ಹಿಂದಿ ಕಥೆಗಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಕಥೆ ಸಿದ್ಧವಾದ ಬಳಿಕ ನಿರ್ದೇಶಕರು ಮತ್ತು ನಟರನ್ನು ಹುಡುಕುತ್ತೇವೆ. ಮೊದಲು ಒಳ್ಳೆಯ ಕಥೆ ಸಿದ್ಧಪಡಿಸುವ ಗುರಿ ಹೊಂದಿದ್ದೇವೆ' ಎಂದು ಹೇಳಿದರು.
ಸದ್ಯ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾದ ಕೆಲಸಗಳು ತಮ್ಮ ಬ್ಯಾನರ್ನಲ್ಲಿ ನಡೆಯುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಮುಂದಿನ ವರ್ಷ ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲಿದೆ. ಧೂಮಂ, ಭಗೀರಾ, ಹಾಗೂ ರಘುತಾತ ಸಿನಿಮಾ ಕೆಲಸ ಚುರುಕುಗೊಂಡಿದೆ. ಸದ್ಯದಲ್ಲೇ ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಅವರನ್ನು ತಮ್ಮ ಬ್ಯಾನರ್ ಮೂಲಕ ಚಿತ್ರರಂಗಕ್ಕೆ ಪರಿಚಯಿಸಲಿದ್ದೇವೆ. ಮುಂದಿನ ವರ್ಷ ನಮ್ಮ ಸಂಸ್ಥೆಯಿಂದ ನಾಲ್ಕೈದು ಚಿತ್ರಗಳು ತೆರೆಕಾಣಲಿವೆ. ಇದಾದ ಬಳಿಕ ಎರಡು ವರ್ಷದಲ್ಲಿ 12 ರಿಂದ 14 ಚಿತ್ರಗಳು ಬರಲಿವೆ. 2024ರಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ಟೈಸನ್, ರಕ್ಷಿತ್ ಶೆಟ್ಟಿ ಅವರ ರಿಚರ್ಡ್ ಆಂಟೋನಿ ಮತ್ತು ಸುಧಾ ಕೊಂಗರ ನಿರ್ದೇಶನದಲ್ಲಿ ಮತ್ತೊಂದು ಚಿತ್ರ ಬರಲಿದೆ ಎಂದು ಅವರು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ:ಸ್ತ್ರೀ ಕುಲಕ್ಕೆ ಧೈರ್ಯ ತುಂಬಿದ ಶಿವಣ್ಣನ 'ವೇದ' ಸಿನಿಮಾ
2018ರಲ್ಲಿ ಕೆಜಿಎಫ್ ದೊಡ್ಡ ಯಶಸ್ಸು ಕಂಡಿತು. ಇದರ ಮುಂದುವರಿದ ಭಾಗವಾಗಿ ಈ ವರ್ಷ ಕೆಜಿಎಫ್ ಚಾಪ್ಟರ್ 2 ಬಂದು ಸಿನಿಮಾ ಕ್ಷೇತ್ರದ ದಾಖಲೆಗಳನ್ನು ಉಡೀಸ್ ಮಾಡಿತು. ಸಿನಿಪ್ರಿಯರು ಕೆಜಿಫ್-3 ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿರುವಾಗ ನಿರ್ಮಾಪಕರು ಹೊಸ ಅಪ್‌ಡೇಟ್ ನೀಡಿದ್ದಾರೆ. ಸಲಾರ್ ಮುಗಿದ ನಂತರ ಪ್ರಶಾಂತ್ ನೀಲ್ ಕೆಜಿಫ್-3 ಮೇಲೆ ಗಮನ ಹರಿಸಲಿದ್ದಾರೆ. ಸಲಾರ್ ಬಳಿಕ ಚಿತ್ರದ ಸ್ಕ್ರಿಪ್ಟ್ ಕೆಲಸ ಶುರು ಮಾಡಲಿದ್ದೇವೆ. ನೀಲ್ ಈಗಾಗಲೇ ಸ್ಟೋರಿ ಲೈನ್ ಹೊಂದಿದ್ದು, ಮುಂದಿನ ವರ್ಷ ಅಥವಾ ಅದರ ನಂತರದ ವರ್ಷ ಆ ಬಗ್ಗೆ ನೀವು ಅರಿತುಕೊಳ್ಳಬಹುದು ವಿಜಯ್ ಕಿರಗಂದೂರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟರು.
ಇದನ್ನೂ ಓದಿ:ಕೆಜಿಎಫ್ ಸಿನಿಮಾಗೆ 4 ವರ್ಷ: ಥಿಯೇಟರ್ಗಳಲ್ಲಿ ಧೂಳೆಬ್ಬಿಸಿದ ಆ ದಿನ ನೆನೆದ ಹೊಂಬಾಳೆ ಫಿಲ್ಮ್ಸ್