ಕರ್ನಾಟಕ

karnataka

ETV Bharat / entertainment

ಕರ್ನಾಟಕಕ್ಕೆ 50ರ ಸಂಭ್ರಮವಾದ್ರೂ, ಕನ್ನಡ ಭಾಷೆ ಮಾತ್ರ ಬೆಳವಣಿಗೆಯಾಗಿಲ್ಲ: ಮುಖ್ಯಮಂತ್ರಿ ಚಂದ್ರು - etv bharat kannada

Mukyamanthri Chandru on Kannada Rajyothsava: ಕನ್ನಡ ರಾಜ್ಯೋತ್ಸವದ ಕುರಿತು ಮುಖ್ಯಮಂತ್ರಿ ಚಂದ್ರು ಅವರು ಈಟಿವಿ ಭಾರತ ಜೊತೆಗೆ ಮಾತನಾಡಿದರು.

ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು

By ETV Bharat Karnataka Team

Published : Oct 31, 2023, 9:36 PM IST

Updated : Oct 31, 2023, 10:57 PM IST

'ಕರ್ನಾಟಕಕ್ಕೆ 50ರ ಸಂಭ್ರಮವಾದ್ರೂ, ಕನ್ನಡ ಭಾಷೆ ಮಾತ್ರ ಬೆಳವಣಿಗೆಯಾಗಿಲ್ಲ'

ಬೆಂಗಳೂರು: ಪ್ರತಿವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಮೈಸೂರು ರಾಜ್ಯವು ಈಗಿನ ಕರ್ನಾಟಕ 1956ರ ನವೆಂಬರ್ 1ರಂದು ಏಕೀಕರಣವಾಗಿದ್ದು, ಇದರ ಸಂಕೇತವಾಗಿ ರಾಜ್ಯೋತ್ಸವ ಆಚರಿಸುತ್ತೇವೆ. ರಾಜ್ಯ ಸರ್ಕಾರ ಕೂಡ ಈ ವರ್ಷ ಕನ್ನಡ ರಾಜ್ಯೋತ್ಸವವನ್ನು ಮನೆ ಮನೆಗಳಲ್ಲಿ ರಂಗೋಲಿ ಹಾಗೂ ದೀಪಗಳನ್ನು ಹಚ್ಚುವ ಮೂಲಕ ಅದ್ಧೂರಿಯಾಗಿ ಆಚರಿಸುವಂತೆ ಮನವಿ ಮಾಡಿದೆ.

ವಿಶಾಲ ಮೈಸೂರು ರಾಜ್ಯಕ್ಕೆ ನವೆಂಬರ್ 1, 1973ರಂದು 'ಕರ್ನಾಟಕ' ಎಂದು ಮರುನಾಮಕರಣ ಮಾಡಲಾಯಿತು. ಈ ಕುರಿತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಈಟಿವಿ ಭಾರತ ಜೊತೆಗೆ ಕನ್ನಡ ಭಾಷೆ ಎಷ್ಟರ ಮಟ್ಟಿಗೆ ಬೆಳವಣಿಗೆ ಆಗಿದೆ ಅನ್ನೋ ವಿಚಾರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಯಾವುದೇ ರಾಜ್ಯದಲ್ಲಿ ಕೂಡ ರಾಜ್ಯದ ಉತ್ಸವ ಅನಿವಾರ್ಯ. ಅದೇ ರೀತಿ ರಾಜ್ಯದ ಉತ್ಸವ ಮಾಡಬೇಕು ಎಂಬ ನಿಯಮವಿಲ್ಲ. ಆದರೆ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ರಾಜ್ಯೋತ್ಸವವನ್ನು ಒತ್ತಿ ಒತ್ತಿ ಹೇಳಬೇಕಿದೆ. ಕನ್ನಡವನ್ನು ಮರೀಬೇಡಿ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಇವತ್ತಿಗೂ ಕನ್ನಡ ಕನ್ನಡೀಕರಣವಾಗಿಲ್ಲ. 50 ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮುದ್ರೆ ಒತ್ತಿದರು. ಆಗ ಕಾಲದಲ್ಲಿ ದೊಡ್ಡ ಮಟ್ಟದ ಹೋರಾಟ ಕೂಡ ಆಗಿತ್ತು. ಅವತ್ತಿನ ಕಾಲ ಘಟ್ಟದಲ್ಲಿ ಸಮಸ್ಯೆಗಳಿಗೆ ಬಗೆ ಹರಿಸುವ ಕೆಲಸ ನಡೆಯುತ್ತಿತ್ತು. ಇದೆಲ್ಲ ರಾಜಕೀಯ ಕಾರಣಕ್ಕೋ ಏನೋ ಗೊತ್ತಿಲ್ಲ. ನಾವು ಕನ್ನಡದ ಹೆಸರು ಇಟ್ಟುಕೊಂಡಿದ್ವಿ. ಆದರೆ ಕನ್ನಡ ಅಷ್ಟೊಂದು ಅಭಿವೃದ್ದಿ ಆಗಿಲ್ಲ. ನಮ್ಮ ಭಾಷೆ ನಮ್ಮದು ಎಂಬ ಅಭಿಮಾನ ಯಾರಲ್ಲೂ ಇಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ತಮಿಳುನಾಡು, ಮಹಾರಾಷ್ಟ್ರ ಹಾಗೂ ತೆಲುಗು ರಾಜ್ಯಗಳನ್ನು ಉದಾಹರಣೆಗೆ ತೆಗೆದುಕೊಂಡರೆ, ಅಲ್ಲಿ ಭಾಷಾಭಿಮಾನ ಜಾಸ್ತಿ ಇದೆ. ಆದರೆ ಕರ್ನಾಟಕದಲ್ಲಿ ಇರುವವರಿಗೆ ಭಾಷಾಭಿಮಾನವಿಲ್ಲ. ಕರ್ನಾಟಕದಲ್ಲಿ ಹುಟ್ಟಿರುವವರು ಹಾಗೂ ಹೊರಗಡೆಯಿಂದ ವಲಸೆ ಬಂದವರು ಇಲ್ಲಿ ಕನ್ನಡ ಕಲಿಯದೇ ಇದ್ದರೂ ನಾನು ಬದುಕಬಲ್ಲೆ ಎಂಬ ಮನೋಭಾವ ಬೆಳೆದಿದೆ. ಇಡೀ ದೇಶವನ್ನು ಒಡೆಯುವ ಕೆಲಸ ನಾನು ಮಾಡುವುದಿಲ್ಲ. ಯಾಕಂದ್ರೆ ವಿಭಿನ್ನ ಭಾಷೆ ವಿಭಿನ್ನ, ಸಂಸ್ಕೃತಿಗಳ ಪದ್ದತಿ ನಮ್ಮ ದೇಶ. ಹೀಗಿರಬೇಕಾದರೆ, ಸಂವಿಧಾನದ ಆಧಾರದ ಮೇಲೆ ಭಾಷೆಯನ್ನು ವಿಂಗಡಣೆ ಮಾಡಿದ್ದೀರಿ. ಕನ್ನಡ ಮಾತನಾಡಲು ತೊಂದರೆ, ಕೆಲಸ ಕೊಡುವುದರಲ್ಲಿ ತೊಂದರೆ, ಶಿಕ್ಷಣದಲ್ಲಿ ತೊಂದರೆ ನಮ್ಮಲ್ಲಿದೆ. ನಮ್ಮ ಮಾತೃ ಭಾಷೆ ಮೊದಲು. ಆ ಮಾತೃಭಾಷೆ ಕೂಡ ಶಿಕ್ಷಣದಲ್ಲೇ ಆಗಬೇಕು ಅಂತ ಗಾಂಧೀಜಿ ಹೇಳಿದ್ದಾರೆ. ಆದ್ರೆ ಅದು ಆಗುತ್ತಿಲ್ಲ. ಅವತ್ತಿನ ಕಾಲಘಟ್ಟಕ್ಕೆ ರಾಜಕೀಯದವರು ಮಾಡಿರುವ ದೊಡ್ಡ ಯಡವಟ್ಟು" ಎಂದರು.

"ಇದರೊಂದಿಗೆ ಸಿಎಂ ಸಿದ್ದರಾಮಯ್ಯನವರು ಒಂದು ಹೇಳಿಕೆ ಕೊಟ್ಟಿದ್ದಾರೆ. 30 ವರ್ಷದಿಂದ ರಾಜಕಾರಣ ಮಾಡಿದ್ದಾರೆ. ಎಲ್ಲಾ ಅಧಿಕಾರಿಗಳು ಟಿಪ್ಪಣಿಗಳನ್ನು ಹಾಗೂ ಪತ್ರಗಳನ್ನು ಕನ್ನಡದಲ್ಲಿ ಬರೆಯಬೇಕು ಎಂದು ತಾಕೀತು ಮಾಡಿದ್ದಾರೆ. ಈಗ ಇದ್ಯಾತಕ್ಕೆ? ಅವರಿಗಿರುವ ಕನ್ನಡಾಭಿಮಾನವನ್ನು, ಕನ್ನಡದ ಬದ್ಧತೆಯನ್ನು ತೋರಿಸುವುದಕ್ಕೆ ಇಷ್ಟು ದಿನ ಬೇಕಿತ್ತಾ" ಎಂದು ಪ್ರಶ್ನಿಸಿದರು.

"ಇನ್ನು ಆ ಕಾಲದಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಅಂತ ನಾಮಕರಣ ಮಾಡಿದಾಗ ಸಾಕಷ್ಟು ಕಡೆಗಳಿಂದ ವಿರೋಧ ವ್ಯಕ್ತವಾಗಿತ್ತು. ಅದರಲ್ಲಿ ದಕ್ಷಿಣ ಭಾಗದಲ್ಲಿ ದೊಡ್ಡ ಮಟ್ಟದ ಹೋರಾಟಗಳು ಆಗಿದ್ದವು. ಮೈಸೂರು ಒಂದು ಊರು ಆದ್ದರಿಂದ ಯಾಕೆ ಏಕೀಕರಣ ಅಂತ ದೊಡ್ಡ ಮಟ್ಟದ ರಾಜಕೀಯ ಒತ್ತಡ, ವಿರೋಧ ಬಂತು. ಆ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು" ಎಂದು ತಿಳಿಸಿದರು.

"ಇನ್ನು ಅಭಿವೃದ್ದಿ ಅನ್ನೋದು ಎರಡು ತರ ಇದೆ. ಒಂದು ಸೌಮ್ಯ ಸ್ವಭಾವ ಹಾಗೂ ಉದಾಸೀನತೆ. ಇಲ್ಲಿ ಆಡಳಿತಾತ್ಮಕವಾಗಿ ಸರ್ಕಾರ ಅಧಿಕಾರಿಗಳ ಬೇಜವಾಬ್ದಾರಿತನವನ್ನು ತೋರಿಸಿದ್ದಾರೆ. ಆವಾಗ್ಲೇ ಒಂದು ಆ್ಯಕ್ಟ್ ಮಾಡಬೇಕಿತ್ತು. ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ವಲಸೆ ಬಂದವರು, ಇಲ್ಲಿ ಬೆಳಯಬೇಕು ಅಂದ್ರೆ ಕನ್ನಡ ಭಾಷೆಯನ್ನು ಕಲಿಯಬೇಕು ಎಂಬ ಕಾನೂನು ತರಬೇಕಿತ್ತು. ಆದನ್ನು ಮಾಡಲಿಲ್ಲ" ಎಂದು ಬೇಸರ ತೋಡಿಕೊಂಡರು.

"ನಿನ್ನೆ ಧ್ವಜವನ್ನು ಲಾಂಚ್ ಮಾಡಿದ್ದೀರಿ. 50ನೇ ವರ್ಷದ ಉತ್ಸವ ಮಾಡ್ತಾ ಇದ್ದೀರಿ. ನಿಮಗೆ ಆ ಧ್ವಜದಲ್ಲಿರುವ ಇಂಡೋ ಅರೇಬಿಕ್ ಪದಗಳು ಕಾಣಿಸಲಿಲ್ಲವೇ? ಅಲ್ಲೇ ಗೊತ್ತಾಗುತ್ತೆ ನಿಮಗೆ ಕನ್ನಡದ ಮೇಲೆ ಎಷ್ಟು ಅಭಿಮಾನಿ, ಪ್ರೀತಿ ಇದೆ" ಎಂದು ಲೇವಡಿ ಮಾಡಿದರು.

"ನಮ್ಮ ರಾಜ್ಯದ ಧ್ವಜ ಹಾರಿಸುವುದಕ್ಕೆ ನಿಮಗೆ ಭಯ ಇದೆ. ನಿಮ್ಮ ಸಂಪುಟದ ಒಬ್ಬ ಮಂತ್ರಿ ನಮಗೆ ಕೇಂದ್ರದಿಂದ ಅನುಮತಿ ಇಲ್ಲ ಅಂತಾರೆ. ಹಾಗಾದ್ರೆ 50ನೇ ವರ್ಷದ ಸಂಭ್ರಮ ಆಚರಿಸೋಣ ಅಂತ ಮನೆ ಮನೆಯಲ್ಲಿ ರಂಗೋಲಿ ಹಾಕಿ ಮನೆಯಲ್ಲಿ ದೀಪ ಹಚ್ಚಿ ಅಂತೀರಾ" ಎಂದು ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.

"ಇವತ್ತು ರಾಜ್ಯೋತ್ಸವದ ಸಂಭ್ರಮ ಮಾಡ್ತಾ ಇದ್ದೀರಿ. ಆದ್ರೆ ನನಗೆ ದುಃಖ ಇದೆ. ಯಾಕಂದ್ರೆ ಕನ್ನಡ ಸಂಸ್ಕೃತಿ ಇಲಾಖೆಗೆ ಹಣ ಬಿಡುಗಡೆ ಮಾಡಿಲ್ಲ. ಅಷ್ಟೇ ಅಲ್ಲ 14 ಅಕಾಡೆಮಿಗಳಿಗೆ ಹಣ ಕೊಟ್ಟು ಐದು ತಿಂಗಳು ಆಗಿವೆ. ಆ ಇಲಾಖೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ನಿಮ್ಮ ಮಂತ್ರಿಗಳಿಗೆ ಹೊಸ ಕಾರುಗಳನ್ನು ಖರೀಸುವುದಕ್ಕೆ ಹಣ ಇದೆ. ಕನ್ನಡ ಅಭಿವೃದ್ಧಿ ಹಾಗು ಕಲಾವಿದರಿಗೆ, ಪ್ರಾಧಿಕಾರ ಇಲಾಖೆಗಳಿಗೆ ಹಣ ಕೊಡ್ತಾ ಇಲ್ಲಾ. ನಿಮ್ಮ ಬಜೆಟ್ ಸಾವಿರ ಕೋಟಿ ಇದೆ, ಆದರೆ ಕನ್ನಡ ಅಭಿಮಾನ ಇದೆ ಅಂತಾ ಹೇಳುವ ಸಿಎಂ ಸಿದ್ದರಾಮಯ್ಯ ಯಾಕೇ ಹಣ ಬಿಡುಗಡೆಗೆ ಅಷ್ಟೊಂದು ಉದಾಸೀನತೆ ತೋರುತ್ತಾರೆ, ಯಾಕೇ ನೀವು ಕನ್ನಡದ ಪರವಾಗಿ ಒಳ್ಳೆ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಚಂದ್ರು ಪ್ರಶ್ನಿಸಿದ್ದಾರೆ.

ಇನ್ನು ಜಿಲ್ಲೆಯಲ್ಲಿರುವ ಕಲಾಮಂದಿರಗಳು, ನಾಟಕ ಮಂದಿರಗಳು ಈಗ ಪುಂಡರ ಅಡ್ಡೆಗಳಾಗಿವೆ. ಹೀಗೆ ಇರಬೇಕಾದ್ರೆ ನೀವು ಯಾವ ಸಂಭ್ರಮ ಮಾಡೋದಿಕ್ಕೆ ಹೊರಟ್ಟಿದ್ದೀರಾ?, ಈ ಎಲ್ಲಾ ಇಲಾಖೆಗಳ ಅಭಿವೃದ್ಧಿಗೆ ಹಣ ಕೊಡಿ, ಜೊತೆಗೆ ಕನ್ನಡೀಕರಣ ಮಾಡಿ. ಮಂದಿರಗಳಲ್ಲಿ, ಮದರಸಾಗಳಲ್ಲಿ ಹಾಗೂ ಕ್ರಿಶ್ಚಿಯನ್ ಮಿಷನರಿಗಳಲ್ಲಿ ಕನ್ನಡ ಮಾಡಿ ಎಂದು ಮನವಿ ಮಾಡಿದ್ದಾರೆ.

ಇನ್ನು ಶಿಕ್ಷಣದಲ್ಲಿ ಕನ್ನಡಕ್ಕೆ ಎಲ್ಲಿ ಬೆಲೆ ಇದೆ. ಕನ್ನಡ ಅಂತೀರಾ, ಖಾಸಗೀಕರಣ ಶಾಲೆಗಳಿಗೆ ಬೆಂಬಲ ಕೊಡುತ್ತೀರಿ, ಹಾಗೇ ಅದೆಷ್ಟೋ ಕನ್ನಡ ಶಾಲೆಗಳು ಮುಚ್ಚುತ್ತಿವೆ, ಸರಿಯಾದ ಸೌಲಭ್ಯಗಳು ಇಲ್ಲ. ಕೆಲವು ಕನ್ನಡ ಶಾಲೆಗಳಿಗೆ ಸರಿಯಾದ ಮೇಲ್ಛಾವಣಿಯೇ ಇಲ್ಲ. ಹೀಗಿರುವಾಗ ಕನ್ನಡ ಸಂಭ್ರಮ ಮಾಡೋದಿಕ್ಕೆ ಹೊರಟ್ಟಿದ್ದೀರಾ ಅಂತಾ ಚಂದ್ರು ಕಿಡಿಕಾರಿದರು.

ಇದರ ಜೊತೆಗೆ ನಮ್ಮ ಧ್ವಜ ಹಾಗು ನಾಡಗೀತೆಯಲ್ಲಿ ಗೊಂದಲವಿದೆ. ಯಾಕೆ ಭಾಷೆ ವಿಚಾರದಲ್ಲಿ ತಾರತಾಮ್ಯ ಮಾಡುತ್ತೀರಿ. ನೆಲ, ಭಾಷೆ ಅಂತಾ ಬಂದಾಗ ಯಾರು ರಾಜಕೀಯವಾಗಿ ಬಳಸಿಕೊಳ್ಳದೇ ಖಾಯಂ ಜಲನೀತಿ, ಶಿಕ್ಷಣ ನೀತಿ, ಭಾಷೆ ನೀತಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ:'ಕರ್ನಾಟಕ'ದ ಮುಕುಟಕ್ಕೆ ಸಾಹಿತಿ ಚದುರಂಗ ಕಿರೀಟ; ಸುವರ್ಣ ಸಂಭ್ರಮದಲ್ಲಿರುವ ರಾಜ್ಯದ ಈ ಹೆಸರಿಗಿದೆ ಸುದೀರ್ಘ ಇತಿಹಾಸ

Last Updated : Oct 31, 2023, 10:57 PM IST

ABOUT THE AUTHOR

...view details