ಕ್ರಿಕೆಟ್ ಕ್ಷೇತ್ರದ ಪಂಡಿತ ಮಹೇಂದ್ರ ಸಿಂಗ್ ಧೋನಿ, ಸಿನಿಮಾ ಕ್ಷೇತ್ರದ ಗಣ್ಯ ವ್ಯಕ್ತಿಗಳಾದ ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಕ್ರೇಜ್ ಬಗ್ಗೆ ನಿಮಗೆ ಗೊತ್ತೇ ಇದೆ. ಈ ಮೂವರಿಗೆ ದೇಶವಲ್ಲದೇ ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈ ಮೂವರೂ ಸೇರಿ ಸಿನಿಮಾ ಮಾಡಿದ್ರೆ ಹೇಗಿರುತ್ತೆ?, ಅಥವಾ ಧೋನಿ ನಿರ್ಮಾಣದಲ್ಲಿ ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಸಿನಿಮಾ ನಿರ್ಮಾಣವಾದ್ರೆ ಹೇಗಿರುತ್ತೆ? ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಸಿಗೋದ್ರಲ್ಲಿ ಸಂಶಯವೇ ಇಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಭವಿಷ್ಯದಲ್ಲಿ ಇದು ಸಾಧ್ಯವಾಗಲಿದೆ ಎಂದು ಧೋನಿ ಪತ್ನಿ ಸಾಕ್ಷಿ ತಿಳಿಸಿದ್ದಾರೆ.
'ಎಲ್‌ಜಿಎಂ' (ಲೆಟ್ಸ್ ಗೆಟ್ ಮ್ಯಾರಿಡ್) ಚಿತ್ರದ ಮೂಲಕ ಕ್ರಿಕೆಟಿಗ ಧೋನಿ ಸಿನಿಮಾ ನಿರ್ಮಾಪಕನಾಗಿ ಹೊರಹೊಮ್ಮುತ್ತಿದ್ದಾರೆ. ಚಿತ್ರ ನಿರ್ಮಾಣದ ವ್ಯವಹಾರಗಳನ್ನು ಪತ್ನಿ ಸಾಕ್ಷಿ ನೋಡಿಕೊಳ್ಳುತ್ತಿದ್ದಾರೆ. ಎಲ್‌ಜಿಎಂ ಸಿನಿಮಾದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿದ್ದಾರೆ. ಕಾಮಿಡಿ, ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಜುಲೈ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ತೆರೆಕಾಣಲು ಕ್ಷಣಗಣನೆ ಆರಂಭವಾಗಿದ್ದು, ಚಿತ್ರತಂಡ ಭರ್ಜರಿ ಪ್ರಚಾರಕಾರ್ಯದಲ್ಲಿ ತೊಡಗಿದೆ.
ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕಿ ಸಾಕ್ಷಿ ಧೋನಿ ಭಾಗವಹಿಸಿದ್ದರು. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡರು. ಜನಪ್ರಿಯ ನಟರಾದ ಅಲ್ಲು ಅರ್ಜುನ್-ಪ್ರಭಾಸ್ ಜೊತೆಗಿನ ಸಿನಿಮಾ ಕುರಿತೂ ಅವರು ಮಾತನಾಡಿದರು.
ಅಲ್ಲು ಅರ್ಜುನ್ ಮತ್ತು ಪ್ರಭಾಸ್ ಭಾರತೀಯ ಚಿತ್ರರಂಗದ ಸ್ಟಾರ್ ನಟರು. ಸದ್ಯ ಅವರು ಬಿಗ್ ಬಜೆಟ್ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ನಾವು ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ಎಲ್‌ಜಿಎಂ ಮೂಲಕ ಮೊದಲ ಹೆಜ್ಜೆ ಇಡುತ್ತಿದ್ದೇವೆ. ಮುಂದೆ ಅವಕಾಶ ಸಿಕ್ಕರೆ ಖಂಡಿತ ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ನಿರ್ಮಾಪಕಿ ಸಾಕ್ಷಿ ಧೋನಿ ತಿಳಿಸಿದ್ದಾರೆ.