ದಕ್ಷಿಣ ಚಿತ್ರರಂಗದ ಪ್ರತಿಭಾವಂತ ಚಲನಚಿತ್ರ ನಿರ್ದೇಶಕ ವಿಘ್ನೇಶ್ ಶಿವನ್ ಅವರು ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಿಂದ ಆಟೋಗ್ರಾಫ್ ಪಡೆದಿದ್ದಾರೆ. ಸುಂದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಾನೂ ಕೂಡ ಎಂ.ಎಸ್ ಧೋನಿ ಅವರ ಕಟ್ಟಾ ಅಭಿಮಾನಿ ಎಂದು ತಿಳಿಸಿದ್ದಾರೆ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡ ನಿರ್ದೇಶಕರು, ಧೋನಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಶೇರ್ ಆಗಿರುವ ವಿಡಿಯೋದಲ್ಲಿ, ಧೋನಿ ಅವರು ವಿಘ್ನೇಶ್ ಅವರ ಬಿಳಿ ಟೀ ಶರ್ಟ್ ಮೇಲೆ ತಮ್ಮ ಆಟೋಗ್ರಾಫ್ ಹಾಕುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ ಮೆಚ್ಚುಗೆ ಗಳಿಸಿದೆ. ಪ್ರತಿಭಾವಂತರು, ಅಭಿಮಾನಿಗಳು ತಮ್ಮ ಮೆಚ್ಚಿನ ಕ್ರಿಕೆಟಿಗ ಮತ್ತು ನಿರ್ದೇಶಕರಿಗೆ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ನಿರ್ದೇಶಕ ವಿಘ್ನೇಶ್ ಶಿವನ್, ''ನನ್ನ ನಾಯಕ, ನನ್ನ ರೋಲ್ ಮಾಡೆಲ್. ಪರಿಶುದ್ಧ ಆತ್ಮದ ಜೊತೆಗಿರುವುದು ಒಂದು ಭಾವನಾತ್ಮಕ ಕ್ಷಣ. ನಾನು ಬಹಳ ಪ್ರೀತಿಸುವ ಮತ್ತು ಪ್ರತಿ ದಿನ ನೋಡುತ್ತಿರುವ ವ್ಯಕ್ತಿ. ನಾನು ಅವರನ್ನು ನೋಡಿದಾಗಲೆಲ್ಲ ನನ್ನ ಮೊಗದಲ್ಲಿ ಬರುವ ಉತ್ಸಾಹವನ್ನು ನೋಡಲು ಬಹಳ ಸಂತೋಷವಾಗಿದೆ'' ಎಂದು ಬರೆದುಕೊಂಡಿದ್ದಾರೆ.
ವಿಘ್ನೇಶ್ ಶಿವನ್ ಕ್ರಿಕೆಟಿಗನ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುವ ವೇಳೆ ಕಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿರುವ ಬಗ್ಗೆಯೂ ಮಾತನಾಡಿದ್ದಾರೆ. ತಮಿಳಿನಲ್ಲಿ ಲೆಟ್ಸ್ ಗೆಟ್ ಮ್ಯಾರೀಡ್ (ಎಲ್‌ಜಿಎಂ) ಮೂಲಕ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ನಿರ್ಮಾಪಕರಾಗಿ ಹೊರ ಹೊಮ್ಮುತ್ತಿದ್ದಾರೆ. ಧೋನಿ ದಂಪತಿ ನಿರ್ಮಾಣದಲ್ಲಿ ಬರುತ್ತಿರುವ ಚೊಚ್ಚಲ ಚಿತ್ರವಿದು. ರಮೇಶ್ ತಮಿಳ್ಮಣಿ ನಿರ್ದೇಶನದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಇದಾಗಿದ್ದು, ಹರೀಶ್ ಕಲ್ಯಾಣ್, ಇವಾನಾ, ನಾದಿಯಾ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.