'ರಾಜಾಹುಲಿ' ಅಂದಾಕ್ಷಣ ನಮಗೆಲ್ಲರಿಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರವೇ ಕಣ್ಮುಂದೆ ಬರುತ್ತದೆ. ಈ ಚಿತ್ರಕ್ಕೆ ಕೆ ಮಂಜು ಹಣ ಹೂಡಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡಿದ್ದ 'ರಾಜಾಹುಲಿ' ಯಶ್ಗೆ ಹೆಸರು ಕೂಡ ತಂದುಕೊಟ್ಟಿತ್ತು. ಇದೀಗ 'ಮಿಸ್ಟರ್ ಆ್ಯಂಡ್ ಮಿಸಸ್ ರಾಜಾಹುಲಿ' ಟೈಟಲ್ ಇಟ್ಟುಕೊಂಡೇ ಕನ್ನಡದಲ್ಲೇ ಮತ್ತೊಂದು ಸಿನಿಮಾ ಬರುತ್ತಿದೆ.
'ರಾಜಾಹುಲಿ' ಚಿತ್ರದ ಜೊತೆ ಕೆಲಸ ಮಾಡಿದ್ದ ಹೊನ್ನರಾಜ್ ಅವರೇ 'ಮಿಸ್ಟರ್ ಆ್ಯಂಡ್ ಮಿಸಸ್ ರಾಜಾಹುಲಿ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರೊಂದಿಗೆ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ನಾಯಕ ನಟರಾಗಿಯೂ ಬಣ್ಣ ಹಚ್ಚಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ತಮ್ಮ ಪ್ರಥಮ ಕಾಣಿಕೆ ಹೇಗಿದೆ ಎಂಬುದರ ಬಗ್ಗೆ ಹೊನ್ನರಾಜ್ ಅನುಭವ ಹಂಚಿಕೊಂಡಿದ್ದಾರೆ.
'ಸಿನಿಮಾ ಮಾಡಬೇಕು ಎನ್ನುವುದು ನನ್ನ ಬಹಳ ವರ್ಷದ ಕನಸು. ಕುಟುಂಬದಲ್ಲಿ ನಡೆದ ನೈಜ ಘಟನೆ ಆಧರಿಸಿ ಈ ಚಿತ್ರ ಸಿದ್ಧಪಡಿಸಲಾಗಿದೆ. ಶೀರ್ಷಿಕೆಗೆ ನ್ಯಾಯ ಒದಗಿಸಿದ್ದು, ಒಳ್ಳೆಯ ಚಿತ್ರ ನೀಡಲಿದ್ದೇವೆ. ಯಾವುದೇ ತೊಂದರೆ ಇಲ್ಲದೆ ಚಿತ್ರೀಕರಣ ಪೂರ್ಣಗೊಂಡಿದೆ. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಇದಾಗಿದ್ದು, ಇದರಲ್ಲಿ ನಾಯಕ ಯಶ್ ಅಭಿಮಾನಿ, ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು, ಸಮಾಜ ಸೇವೆಯಲ್ಲಿರುವ ನಾಯಕ ಮದುವೆ ಆಗ್ತಾನೋ ಇಲ್ಲವೋ ಎನ್ನುವುದೇ ಚಿತ್ರದ ತಿರುಳು. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ ಎಂದರು.
ಈ ಚಿತ್ರದ ಶೂಟಿಂಗ್ಅನ್ನು ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟ ಸುತ್ತಮುತ್ತ ಮಾಡಲಾಗಿದೆ. ಹಾಡೊಂದನ್ನು 12 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಈಗಾಗಲೇ ಒಂದೂ ಕಾಲು ಕೋಟಿ ರೂಪಾಯಿ ಖರ್ಚಾಗಿದೆ. ನಿರ್ಮಾಣದಲ್ಲಿ ಇಡೀ ಕುಟುಂಬ ಸಹಕಾರ ನೀಡಿದ್ದಾರೆ ಎಂದರು.