ಕನ್ನಡ ಚಿತ್ರರಂಗದ ದಿವಂಗತ ನಟ ಅಂಬರೀಶ್ ಮತ್ತು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ಮದುವೆಗೆ ದಿನಗಣನೆ ಆರಂಭವಾಗಿದೆ. ಜೂನ್ ತಿಂಗಳಲ್ಲಿ ಅದ್ಧೂರಿ ಮದುವೆ ಸಮಾರಂಭ ನಡೆಯಲಿದೆ ಎನ್ನುವ ಮಾಹಿತಿ ಇದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದಾರೆ. ಪಿಎಂ ಮೋದಿ ಅವರನ್ನು ಭೇಟಿ ಮಾಡಿರುವ ಅಮ್ಮ ಮಗ, ಮದುವೆ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದ್ದಾರೆ. ಭೇಟಿಯ ಫೋಟೋಗಳನ್ನು ಸುಮಲತಾ ಮತ್ತು ಅಭಿಷೇಕ್ ಸಾಮಾಜಿಕ ಜಾಲತಾದಲ್ಲಿ ಹಂಚಿಕೊಂಡಿದ್ದಾರೆ.
ಸಂಸದೆ ಸುಮಲತಾ ಟ್ವೀಟ್: ಪ್ರಧಾನಿ ಭೇಟಿ ಮಾಡಿದ ಬೆನ್ನಲ್ಲೇ ಸುಮಲತಾ ಅವರು ಸರಣಿ ಟ್ವೀಟ್ ಮಾಡುವ ಮೂಲಕ ದೇಶದ ನಾಯಕನ ಬಗ್ಗೆ ಹಾಡಿ ಹೊಗಳಿದ್ದಾರೆ. ''ವಿಶ್ವದ ಅತ್ಯಂತ ಜನಪ್ರಿಯ ಮತ್ತು ಗೌರವಾನ್ವಿತ ಹಾಗೂ ದೇಶದ ಪ್ರಗತಿಗಾಗಿ ಸದಾ ಸಮರ್ಪಣಾ ಮನೋಭಾವ ಹೊಂದಿರುವ ನಾಯಕರಿಂದ ಪುತ್ರ ಅಭಿಷೇಕ್ ಅಂಬರೀಶ್ ಅವರು ಆಶೀರ್ವಾದ ಪಡೆಯುವಂತಹ ಸೌಭಾಗ್ಯವನ್ನು ಇಂದು ಪಡೆದರು'' ಎಂದು ಟ್ವೀಟ್ ಆರಂಭಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ''ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತವು ಭವಿಷ್ಯದಲ್ಲಿ ಇನ್ನೂ ಮಹತ್ತರವಾದ ಹೆಜ್ಜೆಗಳನ್ನು ಇಡಲಿದೆ ಎನ್ನುವ ವಿಶ್ವಾಸ ನನ್ನದು. ಭಾರತಕ್ಕೆ ಮತ್ತು ಕರ್ನಾಟಕಕ್ಕೆ ಇಂತಹ ಭರವಸೆಯ ನಾಯಕರು ಮತ್ತು ನಾಯಕತ್ವದ ಅಗತ್ಯವಿದೆ ಎನ್ನುವ ದೃಢವಾದ ನಂಬಿಕೆ ನನ್ನದು'' ಎಂದು ಬರೆದಿದ್ದಾರೆ. ಇನ್ನೊಂದು ಟ್ವೀಟ್ನಲ್ಲಿ ''ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಆಗಮಿಸುವಂತೆ ಪ್ರಧಾನಿ ಅವರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡೆಯಲಾಯಿತು'' ಎಂದು ಸಹ ತಿಳಿಸಿದ್ದಾರೆ.
''ಇದೇ ಸಂದರ್ಭದಲ್ಲಿ ರಾಜ್ಯದ ಮತ್ತು ನನ್ನ ಮಂಡ್ಯ ಕ್ಷೇತ್ರದ ಬಗ್ಗೆ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಮಾನ್ಯ ಪ್ರಧಾನಿಗಳು ಮಂಡ್ಯಕ್ಕೆ ಬಂದಾಗ ನನ್ನ ಸ್ವಾಭಿಮಾನಿ ಜನತೆ ಅವರನ್ನು ಬರಮಾಡಿಕೊಂಡ ರೀತಿಯನ್ನು ನೆನಪಿಸಿಕೊಂಡು ಶ್ಲಾಘಿಸಿದರು. ಮಂಡ್ಯ ಹಾಗೂ ಕರ್ನಾಟಕದ ಬಗ್ಗೆ ಅವರಿಗಿರುವ ಅಪಾರವಾದ ಅಭಿಮಾನಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು'' ಎಂದು ಟ್ವೀಟ್ ಮುಕ್ತಾಯಗೊಳಿಸಿದ್ದಾರೆ. ಇನ್ಸ್ಟಾಗ್ರಾಮ್ ಪೇಜ್ನಲ್ಲಿಯೂ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.