ಅಮ್ಮಾ.. ಈ ಎರಡು ಅಕ್ಷರವನ್ನು ಬಣ್ಣಿಸಲು ಪದಗಳೇ ಸಾಲದು. ಅದೊಂದು ಭಾವನಾತ್ಮಕ ಬಂಧ. ಇಂದು ವಿಶ್ವದಾದ್ಯಂತ ಅಮ್ಮಂದಿರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸದಾ ಮಕ್ಕಳಿಗಾಗಿ ಮಿಡಿಯುವ ಜೀವಕ್ಕೆ ಈ ದಿನವನ್ನು ಅರ್ಪಿಸಲಾಗುತ್ತದೆ. ಹಲವಾರು ಕವಿಗಳು, ಬರಹಗಾರರು ಸಾಹಿತ್ಯದ ರೂಪದಲ್ಲಿ ಅಮ್ಮನ ಪ್ರೀತಿಯನ್ನು ವರ್ಣಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೆಲವು ಹಾಡುಗಳು ಅಮ್ಮನ ಮಮತೆಯನ್ನು ಸಾರುವಂತಹವುಗಳಿವೆ.
ಅವುಗಳೆಲ್ಲವೂ ಎಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದುಬಿಡುತ್ತದೆ. ಹಾಡು ಹಳೆಯದಾದರೂ ಸಾಹಿತ್ಯ ಎಂದಿಗೂ ಹಳೆಯದು ಎಂದೇ ಅನಿಸುವುದಿಲ್ಲ. ಅದೆಷ್ಟೇ ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳುತ್ತಲೇ ಇರಬೇಕಿನಿಸುತ್ತದೆ. ಅದಕ್ಕೆ ಕಾರಣ ಬಹುಶಃ ಆ ತಾಯಿಯ ಮೇಲೆ ನಮಗಿರುವ ಪ್ರೀತಿ ಆಗಿರಬಹುದು. ಅಂತಹ ಕೆಲವು ಹಾಡುಗಳು ಇಂತಿವೆ...
ಜೀವ ಕೊಟ್ಟವಳು, ತುತ್ತು ಇಟ್ಟವಳು..: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಜೀವ ಕೊಟ್ಟವಳು, ತುತ್ತು ಇಟ್ಟವಳು.. ಹಾಡು ಸದ್ಯ ಟ್ರೆಂಡಿಂಗ್ನಲ್ಲಿದೆ. ಅಮ್ಮನ ಪ್ರೀತಿಯನ್ನು ವಿಶೇಷವಾಗಿ ಇದರಲ್ಲಿ ಬಣ್ಣಿಸಲಾಗಿದೆ. ಅನಿರುದ್ಧ ಶಾಸ್ತ್ರೀ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದ್ದು, ಗುಮ್ಮಿನೇನಿ ವಿಜಯ್ ಸಂಗೀತ ನೀಡಿದ್ದಾರೆ. ಈ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶಿಸಿದ್ದು, ಬಿಕೆ ಗಂಗಾಧರ್ ನಿರ್ಮಿಸಿದ್ದಾರೆ.
ಕಣ್ಣಾ ಮುಚ್ಚೆ..ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೊದಲ ನಿರ್ದೇಶನದಉಳಿದವರು ಕಂಡಂತೆ ಸಿನಿಮಾದ ಕಣ್ಣಾ ಮುಚ್ಚೆ ಹಾಡು ಬಹಳಷ್ಟು ಹಿಟ್ ಆಗಿದೆ. ತಾಯಿ ಮತ್ತು ಮಗನ ಬಾಂಧವ್ಯವನ್ನು ಚೆನ್ನಾಗಿ ತೋರಿಸಿದ್ದಾರೆ. ರಿಷಬ್ ಶೆಟ್ಟಿ ಮತ್ತು ತಾರಾ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದಾರೆ.