ಸಿನಿಮಾ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ, ಬ್ಯೂಟಿಫುಲ್ ಟೈಟಲ್ ಹೊಂದಿರುವ ಮಾನ್ಸೂನ್ ರಾಗ ಸಿನಿಮಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಡಾಲಿ ಧನಂಜಯ್ ಹಾಗು ರಚಿತಾ ರಾಮ್ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿರುವ ಚಿತ್ರ ಇದೇ ಆಗಸ್ಟ್ 19ರಂದು ರಾಜ್ಯಾದ್ಯಂತ ಬಿಡುಗಡೆ ಆಗಲು ಸಜ್ಜಾಗಿತ್ತು. ಆದರೀಗ ಸಿನಿಮಾ ರಿಲೀಸ್ ದಿನಾಂಕವನ್ನು ಚಿತ್ರತಂಡ ಮುಂದಕ್ಕೆ ಹಾಕಿದೆ.
ಮಾನ್ಸೂನ್ ರಾಗ ಬಿಡುಗಡೆ ದಿನಾಂಕ ಮುಂದೂಡಿಕೆ ನಿರ್ಮಾಪಕ ಎ.ಆರ್ ವಿಖ್ಯಾತ್ ಮಾತನಾಡಿ, ಸಿನಿಮಾ 19ಕ್ಕೆ ಬಿಡುಗಡೆ ಆಗುತ್ತಿಲ್ಲ ಎಂದು ತಿಳಿಸಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಈ ಚಿತ್ರದ ಹಿನ್ನೆಲೆ ಸಂಗೀತವನ್ನು ಮತ್ತಷ್ಟು ಚೆನ್ನಾಗಿ ಮಾಡುವ ಸಲುವಾಗಿ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಜೊತೆಗೆ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರದ ಟೈಟಲ್ಗೆ ತಕ್ಕಂತೆ ಹೊಸ ರೀತಿಯು ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಒತ್ತು ಕೊಡುತ್ತಿರುವ ಕಾರಣ ಸಿನಿಮಾ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಲಾಗಿದೆ ಎಂದರು.
ನಿರ್ದೇಶಕ ವೀರೆಂದ್ರನಾಥ್ ಮಾತನಾಡಿ, ಹಾಡುಗಳು ಈಗಾಗಲೇ ಹಿಟ್ ಆಗಿವೆ. ಮತ್ತಷ್ಟು ಹಾಡುಗಳಿಗೆ ಒತ್ತು ಕೊಡುತ್ತಿರುವ ಕಾರಣ, ನಮ್ಮ ಸಿನಿಮಾ ಮುಂದಕ್ಕೆ ಹೋಗುತ್ತಿದೆ ಅಂತಾ ಹೇಳಿದರು.
ಸದ್ಯ ಅನಾವರಣಗೊಂಡಿರುವ ಮಾನ್ಸೂನ್ ರಾಗ ಚಿತ್ರದ ಟ್ರೈಲರ್ ಅನ್ನು ಮಿಲಿಯನ್ ಗಟ್ಟಲೆ ಜನರು ನೋಡಿದ್ದಾರೆ. ಟ್ರೈಲರ್ನಲ್ಲಿ ರಚಿತಾ ರಾಮ್ ನಿನಗೆ ಒಳ್ಳೇ ಹುಡುಗಿಯರು ತುಂಬಾ ಜನ ಸಿಗುತ್ತಿದ್ದರು. ನಾನು ಈ ರೀತಿ ಅಂತಾ ಗೊತ್ತಿದ್ರು ಯಾಕೆ ನನ್ನನ್ನೇ ಇಷ್ಟಪಟ್ಟೆ? ಅಂತಾ ಧನಂಜಯ್ಗೆ ಕೇಳುವ ಮಾತು ಸಖತ್ ಟ್ರೆಂಡಿಂಗ್ ಅಗಿದೆ. ಲವ್ ಸ್ಟೋರಿ ಜೊತೆಗೆ ಸಂಬಂಧಗಳ ಮೌಲ್ಯಗಳನ್ನು ಹೊಂದಿರುವ ಕಥೆಯಾಗಿದೆ. ಈ ಚಿತ್ರದಲ್ಲಿ ರಚಿತಾ ರಾಮ್ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ವೇಶ್ಯೆಯನ್ನು ಪ್ರೀತಿಸುವ ಪ್ರೇಮಿಯಾಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ.
ಜೊತೆಗೆ ಅಚ್ಯುತ್ ಕುಮಾರ್, ಸುಹಾಸಿನಿ ಮತ್ತು ಯಶಾ ಶಿವಕುಮಾರ್ ಪಾತ್ರಗಳು ಒಂದೊಂದು ಕಥೆಯನ್ನು ಹೇಳುತ್ತವೆ. ಮಾನ್ಸೂನ್ ರಾಗ ಸಿನಿಮಾ 70-80ರ ದಶಕದಲ್ಲಿ ನಡೆಯುವಂಥಹ ಕಥೆಯನ್ನು ಹೊಂದಿದ್ದು, ಗುರುಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಎಸ್.ಕೆ ರಾವ್ ಕ್ಯಾಮರಾ ಕೈಚಳಕ, ಅನೂಪ್ ಸೀಳಿನ್ ಸಂಗೀತ ಮಾನ್ಸೂನ್ ರಾಗ ಚಿತ್ರದ ಹೈಲೆಟ್ಸ್.
ಇದನ್ನೂ ಓದಿ:ದೂದ್ ಪೇಡಾ ದಿಗಂತ್ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸಿಕ್ಕಿದ್ರು ಸುಂದರಿ ಧನು ಹರ್ಷ
ಪುಷ್ಪಕ ವಿಮಾನ ಸಿನಿಮಾ ಬಳಿಕ ಎ.ಆರ್. ವಿಖ್ಯಾತ್ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೈಲರ್ನಿಂದಲೇ ಹೈಪ್ ಕ್ರಿಯೇಟ್ ಆಗಿರುವ ಮಾನ್ಸೂನ್ ರಾಗ ಚಿತ್ರ ಸ್ವಲ್ಪ ದಿನಗಳಲ್ಲೇ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಲಿದೆ.