'ಮಾನ್ಸೂನ್ ರಾಗ' ಚಂದನವನದಲ್ಲಿ ಹಾಡುಗಳಿಂದಲೇ ಕ್ರೇಜ್ ಹುಟ್ಟಿಸಿರೋ ಸಿನಿಮಾ. ಡಾಲಿ ಧನಂಜಯ್ ಹಾಗು ರಚಿತಾ ರಾಮ್ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಚಿತ್ರವಿದು. ಈಗಾಗಲೇ ಹಾಡುಗಳಿಂದ ಸಿನಿಮಾಪ್ರಿಯರನ್ನು ಸೆಳೆಯುತ್ತಿರುವ ಸಿನಿಮಾ ಆಗಸ್ಟ್ 19ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಟ್ರೈಲರ್ ವರಮಹಾಲಕ್ಷ್ಮೀ ಹಬ್ಬದ ಈ ದಿನ ಅನಾವರಣಗೊಂಡಿದೆ.
ರಚಿತಾ ರಾಮ್, "ನಿನಗೆ ಒಳ್ಳೆ ಹುಡುಗೀರು ತುಂಬಾ ಜನ ಸಿಗ್ತಿದ್ರು. ನಾನು ಈ ರೀತಿ ಅಂತಾ ಗೊತ್ತಿದ್ರೂ ಯಾಕೆ ನನ್ನನ್ನೇ ಇಷ್ಟ ಪಟ್ಟೆ" ಎಂದು ಧನಂಜಯ್ಗೆ ಕೇಳುವ ಮಾತಿನಿಂದ ಚಿತ್ರದ ಟ್ರೈಲರ್ ಶುರುವಾಗುತ್ತದೆ. ರಚಿತಾ ರಾಮ್ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಕೆಯನ್ನು ಪ್ರೀತಿಸುವ ಪ್ರೇಮಿಯಾಗಿ ಧನಂಜಯ್ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಸುಹಾಸಿನಿ ಮತ್ತು ಯಶಾ ಶಿವಕುಮಾರ್ ಪಾತ್ರಗಳು ಒಂದೊಂದು ಕಥೆ ಹೇಳಲಿವೆ.