ಮೂರು ವರ್ಷಗಳ ಹಿಂದೆ ಇದೇ ದಿನದಂದು ಬಾಲಿವುಡ್ ಚಿತ್ರರಂಗದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿತ್ತು. ನಟ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಮುಂಬೈನ ಅವರ ನಿವಾಸದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಬಾಲಿವುಡ್ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿತ್ತು.
ಇಂದಿಗೆ ಯುವ ನಟ ನಿಧನ ಹೊಂದಿ ಮೂರು ವರ್ಷವಾಗಿದೆ. ಸ್ನೇಹಿತರು, ಕುಟುಂಬಸ್ಥರು, ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಕೂಡ ಸುಶಾಂತ್ ಅವರ ಅಪಾರವಾಗಿ ನೆನೆಯುತ್ತಿದ್ದಾರೆ. ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಬುಧವಾರ ಸುಶಾಂತ್ ಮೂರನೇ ಪುಣ್ಯತಿಥಿಯಂದು ಅವರಿಗೆ ಸಂತಾಪ ಸೂಚಿಸಿದ್ದಾರೆ. ಎಸ್ಎಸ್ಆರ್ ಅವರ ಕೊಲೇಜ್ ಫೋಟೋಗಳನ್ನು ಹಂಚಿಕೊಂಡು, ಹೃದಯಸ್ಪರ್ಶಿಯಾಗಿ ಕ್ಯಾಪ್ಶನ್ ಬರೆದಿದ್ದಾರೆ.
"ಲವ್ ಯೂ ಭಾಯ್, ಮತ್ತು ನಿಮ್ಮ ಬುದ್ಧಿವಂತಿಕೆಗೆ ಸೆಲ್ಯೂಟ್. ನಿಮ್ಮನ್ನು ಎಲ್ಲಾ ಕ್ಷಣದಲ್ಲೂ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ನೀವು ಈಗ ನನ್ನ ಭಾಗವಾಗಿದ್ದೀರಿ ಎಂದು ನನಗೆ ತಿಳಿದಿದೆ. ನೀವು ನನ್ನ ಉಸಿರಿನಲ್ಲೇ ಬೆರೆತು ಹೋಗಿದ್ದೀರಿ. #SushantIsAlive #WeAreSushant" ಎಂದು ಸಹೋದರ ಸುಶಾಂತ್ಗೆ ಶ್ವೇತಾ ಹೃದಯಸ್ಪರ್ಶಿ ಅಕ್ಷರ ನಮನವನ್ನು ಸಲ್ಲಿಸಿದ್ದಾರೆ.
ಎಸ್ಎಸ್ಆರ್ ಅಭಿಮಾನಿಗಳು ಶ್ವೇತಾ ಸಿಂಗ್ ಪೋಸ್ಟ್ಗೆ ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ. ಅಭಿಮಾನಿಯೊಬ್ಬರು, "ನಾವು ಅವರನ್ನು ಜೀವಂತವಾಗಿರಿಸಿಕೊಳ್ಳುತ್ತೇವೆ. ಅವರು ಎಲ್ಲಿಯೂ ಹೋಗಿಲ್ಲ, ಯಾವಾಗಲೂ ನಮ್ಮ ಹೃದಯ ಮತ್ತು ಆತ್ಮಗಳಲ್ಲಿ ಜೀವಂತವಾಗಿರುತ್ತಾರೆ. ಅವರಲ್ಲಿದ್ದ ಉತ್ತಮ ಗುಣವೆಂದರೆ ತುಂಬಾ ಧನಾತ್ಮಕವಾಗಿರುವುದು ಮತ್ತು ಯಾರಿಗೂ ಕೆಟ್ಟದ್ದನ್ನು ಹೇಳದ ಮತ್ತು ಯೋಚಿಸದ ವ್ಯಕ್ತಿಯಾಗಿರುವುದು. ಹಾಗಾಗಿಯೇ ಅವರು ಇಂದಿಗೂ ಲಕ್ಷಾಂತರ ಅಭಿಮಾನಿಗಳ ಜೊತೆಯೇ ಇದ್ದಾರೆ" ಎಂದು ಕಮೆಂಟ್ ಮಾಡಿದ್ದಾರೆ.