ಬೆಂಗಳೂರು: ಸುದೀಪ್ ಕನ್ನಡ ಚಿತ್ರರಂಗದ ಸುಪ್ರಸಿದ್ಧ ನಟ. ಅವರಿಗೆ ಯಾರೋ ಕಿಡಿಗೇಡಿಗಳು ಬೆದರಿಕೆ ಹಾಕಿದರೆ ಸರ್ಕಾರ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ನಗರದ ಹೊರವಲಯದಲ್ಲಿರುವ ಗೋಲ್ಡನ್ ಪಾಮ್ಸ್ ರೆಸಾರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಸುದೀಪ್ ಬಿಜೆಪಿ ಸೇರ್ಪಡೆ ವಿಷಯ ನನಗೆ ಗೊತ್ತಿಲ್ಲ. ಮಧ್ಯಾಹ್ನ 1.30ಕ್ಕೆ ಮಾಧ್ಯಮಗೋಷ್ಟಿ ಇದೆ, ಬನ್ನಿ ಎಂದು ಸಿಎಂ ಕರೆದಿದ್ದಾರೆ. ಹಾಗಾಗಿ ಅಲ್ಲಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.
ನಟ ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸುದೀಪ್ ಓರ್ವ ಸುಪ್ರಸಿದ್ಧ ನಾಯಕ ನಟ. ಅವರಿಗೆ ಬೆದರಿಕೆ ಹಾಕಿದರೆ ಸರ್ಕಾರ ನೋಡಿಕೊಂಡು ಸುಮ್ಮನೆ ಕೂರಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈ ರೀತಿ ಮಾಡುವುದು ಹತಾಶ ಮನೋಭಾವ. ಇಷ್ಟು ವರ್ಷ ಇಲ್ಲದ ಆಪಾದನೆ ಈಗ ಮಾಡುತ್ತಿದ್ದಾರೆ ಅಂದರೆ ಏನು ಅರ್ಥ. ಸರ್ಕಾರ ಹಾಗೂ ರಾಜ್ಯದ ಜನ ಇದನ್ನೆಲ್ಲಾ ಗಮನಿಸುತ್ತಿದ್ದಾರೆ. ಬೆದರಿಕೆ ಹಾಕುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ಹೇಳಿದರು.
ಬಿಜೆಪಿಯು ಸಿನಿಮಾ ನಟರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ನಿರ್ಧರಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಸುಧಾಕರ್, ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯಕ್ಕೆ ಸಿನಿಮಾ ತಾರೆಯರ ಬಳಕೆ ಮಾಡುತ್ತಿರುವುದು ಹೊಸದೇನು ಅಲ್ಲ. ಚಲನಚಿತ್ರ ನಟರು, ಕ್ರೀಡಾಪಟುಗಳು ಒಂದು ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳುವುದು ಅಥವಾ ಒಂದು ಪಕ್ಷದ ಪರ ಪ್ರಚಾರ ಮಾಡುವುದು ಇದೇನು ಮೊದಲಲ್ಲ. ಅನೇಕ ವರ್ಷಗಳಿಂದ ಈ ರೀತಿ ನಡೆದುಕೊಂಡು ಬಂದಿದೆ. ಅದರಂತೆ ಈಗ ಸುದೀಪ್ ಬಂದು ನಮ್ಮ ಪಕ್ಷದ ಪರ ಪ್ರಚಾರ ಮಾಡಿದರೆ ಸ್ವಾಗತ ಮಾಡುತ್ತೇನೆ, ಅದಕ್ಕಿಂತ ಸಂತೋಷ ಏನಿದೆ ಎಂದರು.