ಕೆಲವು ನಿರ್ದೇಶಕರು ಹಾಗೂ ನಟರು ವಿಭಿನ್ನ ಕಥೆ ಮಾಡಿರುತ್ತಾರೆ. ಆದರೆ ಅಂತಹ ಸಿನಿಮಾವನ್ನು ನಿರ್ಮಾಣ ಮಾಡಲು ಯಾರೂ ಮುಂದೆ ಬರೋಲ್ಲ. ಅಂಥವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಪೂರ್ವ ಅವಕಾಶ ಕೊಟ್ಟಿದ್ದಾರೆ. ಈ ಹಿಂದೆ ಸೃಷ್ಟಿ ಬ್ಯಾನರ್ ಅಡಿಯಲ್ಲಿ ನಿಷ್ಕರ್ಷ, ಕೌರವ, ಶಾಪ ಎಂಬೆಲ್ಲ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಬಿ.ಸಿ.ಪಾಟೀಲ್, ಮುಂದಿನ ದಿನಗಳಲ್ಲಿ ಕೌರವ ಎಂಬ ಪ್ರೊಡಕ್ಷನ್ ಸಂಸ್ಥೆಯನ್ನು ಹುಟ್ಟು ಹಾಕಿ ವರ್ಷಕ್ಕೆರಡು ಅಥವಾ ಮೂರು ಸಿನಿಮಾಗಳನ್ನು ಈ ಸಂಸ್ಥೆಯಡಿ ನಿರ್ಮಿಸಲು ಮುಂದಾಗಿದ್ದಾರೆ.
ಬಿ.ಸಿ.ಪಾಟೀಲ್ ಅಭಿನಯಿಸುತ್ತಿರುವ ಗರಡಿ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. 'ಹೊಸ ನಿರ್ದೇಶಕರು ಹಾಗೂ ನಟರು ಒಳ್ಳೆಯ ಕಥೆಗಳನ್ನು ಮಾಡಿಕೊಂಡು ಬಂದರೆ ಆ ಕಥೆ ನಮಗೆ ಚೆನ್ನಾಗಿದೆ ಅಂತ ಅನ್ನಿಸಿದರೆ ಸಿನಿಮಾ ನಿರ್ಮಾಣ ಮಾಡಲಾಗುವುದು. ಪ್ರೊಡಕ್ಷನ್ ಕೆಲಸವನ್ನು ನನ್ನ ಮಗಳು ಸೃಷ್ಟಿ ಪಾಟೀಲ್ ನೋಡಿಕೊಳ್ಳಲಿದ್ದಾರೆ. ನಮ್ಮ ಕೌರವ ಪ್ರೊಡಕ್ಷನ್ ಸಂಸ್ಥೆ ಸಾಮಾಜಿಕ ಕಳಕಳಿಯ ಜೊತೆಗೆ ಮನರಂಜನಾತ್ಮಕ ಸಿನಿಮಾಗಳನ್ನು ಮಾಡುವ ಉದ್ದೇಶ ಹೊಂದಿದೆ' ಎಂದರು.