ಮುಂಬೈ (ಮಹಾರಾಷ್ಟ್ರ): ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್‌ಗೆ ಜೀವ ಬೆದರಿಕೆ ಇದ್ದು ಅವರಿಗೆ ಬಿಗಿ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಂಕರ್ ಅವರು ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಅವರಿಗೆ ಪತ್ರ ಬರೆದಿದ್ದಾರೆ.
ಉರ್ಫಿ ಜಾವೇದ್ ಚಿತ್ರ-ವಿಚಿತ್ರ ಮತ್ತು ತುಂಡು ಬಟ್ಟೆ ಧರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲತೆ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕಿ ಚಿತ್ರಾ ವಾಘ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ವಾಘ್ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ಕೂಡ ದಾಖಲಿಸಿದ್ದರು. ಅದರಂತೆ ಉರ್ಫಿ ಜಾವೇದ್ ಪೊಲೀಸ್ ಠಾಣೆಗೂ ಹಾಜರಾಗಿದ್ದರು. ಇದಾದ ಬಳಿಕ ಉರ್ಫಿ ಜಾವೇದ್ ತನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.
ಸದ್ಯ ಈ ದೂರನ್ನು ಆಲಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಂಕರ್ ಅವರು ನಟಿಗೆ ಭದ್ರತೆ ಒದಗಿಸುವಂತೆ ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ನನ್ನನ್ನು ಹತ್ತಿಕ್ಕಲು ಬಿಜೆಪಿ ನಾಯಕಿ ಚಿತ್ರಾ ವಾಘ್ ವಿನಾ ಕಾರಣ ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ಯಾವಾಗ ಬೇಕಾದರೂ ಮಾರಣಾಂತಿಕ ದಾಳಿ ನಡೆಸಬಹುದು ಎಂದು ಉರ್ಫಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟೋಲ್ಗೇಟ್ ಅಪಘಾತ: ಪ್ರಶ್ನಿಸಿದ್ದಕ್ಕೆ ಬೈಕ್ನಲ್ಲಿ ಎಳೆದುಕೊಂಡು ಹೋದ ಸವಾರ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಭದ್ರತೆ ಒದಗಿಸುವಂತೆ ಕೆಲವು ಸೂಚನೆಗಳನ್ನು ನೀಡಿ ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕೈಗೊಂಡ ಕ್ರಮಗಳ ವರದಿ ಸಲ್ಲಿಸಬೇಕು ಎಂದೂ ಸಹ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಯಾರು ಯಾವುದಾದರೂ ಬಟ್ಟೆ ಧರಿಸಲು ದೇಶದಲ್ಲಿ ಮುಕ್ತ ಅವಕಾಶವಿದೆ. ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೆ ಈ ಸ್ವಾತಂತ್ರವನ್ನು ನೀಡಿದೆ.
ಮಹಾರಾಷ್ಟ್ರದ ರಾಜಧಾನಿ ಮುಂಬೈನಂತಹ ಮಹಾನಗರದಲ್ಲಿ ಅಸುರಕ್ಷಿತ ಭಾವನೆ ಕಾಡುತ್ತಿದೆ. ಇದು ಗಂಭೀರ ವಿಷಯ. ಆದ್ದರಿಂದ ಮುಂಬೈ ಪೊಲೀಸ್ ಆಯುಕ್ತರು ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ವರದಿಯನ್ನು ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸುವಂತೆ ಚಾಕಂಕರ್ ಸೂಚನೆ ನೀಡಿದ್ದಾರೆ.