ಶ್ರೀರಾಮ್ ರಾಘವನ್ ನಿರ್ದೇಶನದ 'ಮೇರಿ ಕ್ರಿಸ್ಮಸ್' ಜನವರಿ 12 ರಂದು ತೆರೆಗಪ್ಪಳಿಸಿತು. ಮಿಶ್ರ ಪ್ರತಿಕ್ರಿಯೆ ಗಳಿಸಿದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಪ್ರದರ್ಶನ ಮುಂದುವರಿಸಿದೆ. ಇದೇ ಮೊದಲ ಬಾರಿ ತೆರೆ ಹಂಚಿ ಕೊಂಡಿರುವ ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಅವರ ಈ ಥ್ರಿಲ್ಲರ್ ಸಿನಿಮಾ ನಾಲ್ಕು ದಿನಗಳಲ್ಲಿ 11.38 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಕಳೆದ ದಿನ ಅಂದರೆ ಸೋಮವಾರ ಈ ಚಿತ್ರ ಸರಿಸುಮಾರು 1.65 ಕೋಟಿ ರೂ. ಸಂಪಾದನೆ ಮಾಡಿದೆ. ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ತೆರೆ ಕಂಡಿರುವ ಈ ಚಿತ್ರ ಮೊದಲ ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 2.45 ಕೋಟಿ ರೂ. ಕಲೆಕ್ಷನ್ ಮಾಡಿತು. ಸಾಧಾರಣ ಅಂಕಿ - ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಈ ಚಿತ್ರ ಎರಡನೇ ದಿನ - ಶನಿವಾರದಂದು 3.45 ಕೋಟಿ ರೂ.ನ ವ್ಯವಹಾರ ನಡೆಸಿತು. ಮೂರನೇ ದಿನ 3.83 ಕೋಟಿ ರೂ., ನಾಲ್ಕನೇ ದಿನ 1.65 ಕೋಟಿ ರೂ. ಸಂಪಾದಿಸೋ ಮೂಲಕ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಒಟ್ಟು 11.38 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಕ್ರಿಸ್ಮಸ್ ಹಬ್ಬ ಇಬ್ಬರು ಅಪರಿಚಿತರನ್ನು ಹೇಗೆ ಒಟ್ಟುಗೂಡಿಸುತ್ತದೆ ಎಂಬುದು ಕಥೆ. ಇಬ್ಬರು ಅಪರಿಚಿತರು ಭೇಟಿಯಾಗುತ್ತಾರೆ. ಪ್ರೇಮಾಂಕುರವಾಗುತ್ತದೆ, ಕಥಾವಸ್ತು ಹೇಗೆ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ ಅನ್ನೋದನ್ನು 'ಮೇರಿ ಕ್ರಿಸ್ಮಸ್'ನಲ್ಲಿ ಕಾಣಬಹುದು. ಶ್ರೀರಾಮ್ ರಾಘವನ್ ನಿರ್ದೇಶನದ ಈ ಥ್ರಿಲ್ಲರ್ ಮೂವಿ ಹಿಂದಿ ಮತ್ತು ತಮಿಳಿನಲ್ಲಿ ನಿರ್ಮಾಣವಾಗಿದೆ. ಎರಡೂ ಭಾಷೆಗೂ ಎರಡು ಬಾರಿ ಶೂಟಿಂಗ್ ನಡೆಸಲಾಗಿದೆ. ಹೌದು, ಹಿಂದಿ ಮತ್ತು ತಮಿಳಿನಲ್ಲಿ ವಿಭಿನ್ನ ಪೋಷಕ ಪಾತ್ರಗಳೊಂದಿಗೆ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ.