ಮೆಲ್ಲುಸಿರೆ ಸವಿಗಾನ ಹಾಡಿಗೆ ಹೆಜ್ಜೆ ಹಾಕಿದ್ದೇನೆ. ಈ ಹಾಡಿನಲ್ಲಿ ಕಾಣಿಸಿಕೊಳ್ಳಲು ಕಾರಣ ರಾಜ್ಕುಮಾರ್ ಅಪ್ಪಾಜಿ ಹಾಗು ಲೀಲಾವತಿ ಅಮ್ಮ. ಅವರ ಅದ್ಭುತ ಹಾಡಿಗೆ ನೃತ್ಯ ಮಾಡಿರೋ ಖುಷಿ ನನಗಿದೆ ಎಂದು ನಟಿ ರೀಷ್ಮಾ ನಾಣಯ್ಯ ತಿಳಿಸಿದರು.
ಡಾ. ರಾಜ್ಕುಮಾರ್ ಹಾಗೂ ಲೀಲಾವತಿ ಅಭಿನಯಿಸಿದ್ದ ವೀರಕೇಸರಿ ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡನ್ನು ಸ್ಪೂಕಿ ಕಾಲೇಜ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಏಕ್ ಲವ್ ಯಾ ಖ್ಯಾತಿಯ ರೀಷ್ಮಾ ನಾಣಯ್ಯ ಈ ಸುಮಧುರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ಅ ನೆರವೇರಿತು. ಹಿರಿಯ ನಿರ್ದೇಶಕ ಭಗವಾನ್, ಸಾಹಿತಿ ದೊಡ್ಡರಂಗೇಗೌಡ ಈ ಹಾಡನ್ನು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ನಟಿ ರೀಷ್ಮಾ ನಾಣಯ್ಯ ಹಾಡಿನಲ್ಲಿ ಹೆಜ್ಜೆ ಹಾಕಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಆ ಕಾಲದಲ್ಲಿ ಸಿನಿಮಾ ಮಾಡುವುದು ಅಷ್ಟು ಸುಲಭ ಇರಲಿಲ್ಲ. ಈಗ ಹಾಗಲ್ಲ, ತಂತ್ರಜ್ಞಾನ ಮುಂದುವರಿದಿದೆ. ಮೆಲ್ಲುಸಿರೆ ಸವಿಗಾನ ಹಾಡಿಗೆ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ರೀಷ್ಮಾ ನಾಣಯ್ಯ ನೃತ್ಯ, ಭೂಷಣ್ ನೃತ್ಯ ನಿರ್ದೇಶನ ಎಲ್ಲವೂ ಚೆನ್ನಾಗಿದೆ. ನಿರ್ದೇಶಕ ಭರತ್ ನನ್ನ ಶಿಷ್ಯ. ಉತ್ತಮ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಒಳ್ಳೆಯ ನಾಯಕಿ ಸಿಕ್ಕಿದ್ದಾರೆ ಎಂದರು ಹಿರಿಯ ನಿರ್ದೇಶಕ ಭಗವಾನ್.
ಅಂದಿನ ಈ ಹಾಡನ್ನು ಈಗಿನ ರೀತಿಗೆ ಚಿತ್ರೀಕರಿಸುವುದು ಕಷ್ಟಸಾಧ್ಯ. ಅದರೆ ಅದನ್ನು ನಿರ್ದೇಶಕ ಭರತ್ ಸಾಧ್ಯವಾಗಿಸಿದ್ದಾರೆ ಎಂದು ಸಾಹಿತಿ ದೊಡ್ಡರಂಗೇಗೌಡ ತಿಳಿಸಿದರು.