ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಪತಿ, ಜನಪ್ರಿಯ ನಟ ಚಿರಂಜೀವಿ ಸರ್ಜಾ ನಿಧನದ ನಂತರ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದರು. ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಚಿರು ನಿಧನದ ಸಮಯದಲ್ಲಿ ಗರ್ಭಿಣಿಯಾಗಿದ್ದ ಅವರು ಬಳಿಕ ಮಗನ ಆರೈಕೆಯಲ್ಲಿ ಬ್ಯುಸಿಯಾಗಿ ಬಿಟ್ಟಿದ್ದರು. ಇದೀಗ 'ತತ್ಸಮ ತದ್ಭವ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ವಿಭಿನ್ನ ಕಥಾಹಂದರವುಳ್ಳ ಈ ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಸೈಲೆಂಟ್ ಆಗಿಯೇ ಸಿನಿಮಾದ ಶೂಟಿಂಗ್ ಕೂಡ ಮುಕ್ತಾಯಗೊಂಡಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಯಿದೆ. ಈ ಕುತೂಹಲವನ್ನು ದ್ವಿಗುಣ ಮಾಡುವ ರೀತಿಯಲ್ಲಿ ಇಂದು ಸಿನಿಮಾದ ಟೀಸರ್ ಮೂಡಿಬಂದಿದೆ. ಮೊದಲ ನೋಟವು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿದ್ದು, ಮೇಘನಾ ರಾಜ್ ನಟನೆ ಎಲ್ಲರ ಗಮನ ಸೆಳೆದಿದೆ. ಆಗಸ್ಟ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಟೀಸರ್ನಲ್ಲಿ ಮಾಹಿತಿ ನೀಡಲಾಗಿದೆ.
ಟೀಸರ್ನಲ್ಲಿ ಏನಿದೆ?: 'ತತ್ಸಮ ತದ್ಭವ' ಇದೊಂದು ಮಿಸ್ಸಿಂಗ್ ಕೇಸ್ನ ಕಥೆ. 'ನನ್ನ ಹೆಸರು ಆರಿಕಾ. ನನ್ನ ಪತಿ ಕಾಣೆಯಾಗಿದ್ದಾರೆ' ಎಂದು ಮೇಘನಾ ರಾಜ್ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡುತ್ತಾರೆ. ಈ ಕೇಸನ್ನು ಕೈಗೆತ್ತಿಕೊಳ್ಳುವುದು ಪ್ರಜ್ವಲ್ ದೇವರಾಜ್. ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್ನ ಉದ್ದಕ್ಕೂ ಸಸ್ಪೆನ್ಸ್ ಇದೆ. ಕಾಣೆಯಾದವರನ್ನು ಹುಡುಕುವ ಕಥೆಯನ್ನು ಹಾರರ್ ರೀತಿಯಲ್ಲಿ ತೋರಿಸಲಾಗಿದೆ. ಇದರ ಜೊತೆಗೆ ಒಂದಿಷ್ಟು ಥ್ರಿಲ್ಲಿಂಗ್ ಅಂಶ ಸೇರಿಸಲಾಗಿದೆ.