ಕರ್ನಾಟಕ

karnataka

ETV Bharat / entertainment

'ತತ್ಸಮ ತದ್ಭವ' ಮೂಲಕ ಮೇಘನಾ ರಾಜ್​ ರೀ ಎಂಟ್ರಿ: ಸೈಲೆಂಟ್​ ಆಗಿ ಶೂಟಿಂಗ್​ ಮುಕ್ತಾಯ

'ತತ್ಸಮ ತದ್ಭವ' ಚಿತ್ರದ ಮೂಲಕ ಮೇಘನಾ ರಾಜ್ ಅವರು ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.

Tatsama Tadbhava movie
'ತತ್ಸಮ ತದ್ಭವ' ಚಿತ್ರತಂಡ

By

Published : Apr 15, 2023, 10:31 AM IST

ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್​ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಅವರ ಪತಿ, ನಟ ಚಿರಂಜೀವಿ ಸರ್ಜಾ ಅಗಲಿಕೆ ನಂತರ ಅವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಚಿರು ನಿಧನದ ಸಮಯದಲ್ಲಿ ಗರ್ಭಿಣಿಯಾಗಿದ್ದ ಅವರು ಬಳಿಕ ಮಗನ ಆರೈಕೆಯಲ್ಲಿ ಬ್ಯುಸಿಯಾಗಿ ಬಿಟ್ಟಿದ್ದರು.

ಇದೀಗ 'ತತ್ಸಮ ತದ್ಭವ' ಚಿತ್ರದ ಮೂಲಕ ಮೇಘನಾ ರಾಜ್ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾದ ಶೂಟಿಂಗ್​ ಸೈಲೆಂಟ್​ ಆಗಿಯೇ ಮುಗಿದಿದೆ.​ ಕೆಲವು ತಿಂಗಳ ಹಿಂದೆಯೇ ಈ ಚಿತ್ರದ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಹೆಚ್ಚಿನ ಸ್ಯಾಂಡಲ್​ವುಡ್​ ತಾರೆಯರು ಪೋಸ್ಟರ್​ ಅನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿಕೊಂಡಿದ್ದರು.

'ತತ್ಸಮ ತದ್ಭವ' ಚಿತ್ರತಂಡ

ಈ ಸಿನಿಮಾದ ಬಗ್ಗೆ ಮಾತನಾಡಿದ ನಟಿ ಮೇಘನಾ ರಾಜ್​, "ನಿಜವಾದ ಸ್ನೇಹಿತರು ಯಾವಾಗಲೂ ಜೊತೆಗಿರುತ್ತಾರೆ. ಅಂತಹ ಸ್ನೇಹಿತರು ನನಗಿದ್ದಾರೆ. ನನಗಾಗಿ ಈ ಸಿನಿಮಾ ಮಾಡಿದ್ದಾರೆ. ನಾನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದೇನೆ. ಸಿನಿಮಾವನ್ನು ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಒಳ್ಳೆಯ ಕಥೆ ಬರೆದಿದ್ದು ಜೊತೆಗೆ ನಿರ್ದೇಶನ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈವರೆಗೂ ನಾನು ಇಂತಹ ಪಾತ್ರ ಮಾಡಿಲ್ಲ. ಮುಂದೆ ಮಾಡುತ್ತೇನೋ, ಇಲ್ಲವೊ, ಗೊತ್ತಿಲ್ಲ. ಆದರೆ, ಖಂಡಿತ ಈ ಸಿನಿಮಾ ನನಗೆ ಒಳ್ಳೆಯ ಹೆಸರು ತಂದು ಕೊಡುತ್ತೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ನಟ ಪ್ರಜ್ವಲ್ ದೇವರಾಜ್ ಮಾತನಾಡಿ, "ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ ಒಂದು ಮುಖ್ಯ ಪಾತ್ರ ಬರುತ್ತದೆ. ಈ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಅವರಲ್ಲಿ ಕೇಳಿದೆ. ಅವರು ನನ್ನ ಹೆಸರನ್ನೇ ಸೂಚಿಸಿದರು. ಹೀಗಾಗಿ ಈ ಚಿತ್ರದಲ್ಲಿ ನಾನು ಕೂಡ ನಟಿಸಿದ್ದೇನೆ. ಸ್ನೇಹಿತರ ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿ ನನಗಿದೆ" ಎಂದು ಹೇಳಿದರು.

"ಇದೊಂದು ಇನ್ವೆಸ್ಟಿಗೇಷನ್​​ ಕ್ರೈಮ್ ಥ್ರಿಲ್ಲರ್. ಕನ್ನಡದಲ್ಲಿ ಇಂತಹ ಕಥೆ ಬಂದಿರುವುದು ಅಪರೂಪ. ನೋಡುಗರಿಗೂ ಇಷ್ಟವಾಗಬಹುದು ಎಂಬ ನಂಬಿಕೆಯಿದೆ" ಎಂದು ನಿರ್ದೇಶಕ ವಿಶಾಲ್ ಆತ್ರೇಯ ಹೇಳಿದರು. ಬಳಿಕ ನಿರ್ಮಾಪಕ ಪನ್ನಗಭರಣ ಮಾತನಾಡಿ, "ಬಹುತೇಕ ಈ‌ ಸಿನಿಮಾ ಶೂಟಿಂಗ್ ಮುಗಿದಿದೆ. ರೀ ರೆಕಾರ್ಡಿಂಗ್ ನಡೆಯುತ್ತಿದೆ. ಚುನಾವಣೆ ಮುಗಿದ ನಂತರ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ" ಎಂದು ತಿಳಿಸಿದರು.

ಈ ವೇಳೆ ನಟಿ ಶ್ರುತಿ ಮಾತನಾಡಿ, "ಸಮಾಜದಲ್ಲಿ ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ, ಅವಕಾಶ ಕೊಡುವುದು ಮುಖ್ಯ. ಮೇಘನಾ ರಾಜ್ ವಿಷಯದಲ್ಲಿ, ಅವರ ಸ್ನೇಹಿತರೆಲ್ಲರೂ ಸೇರಿ ಅವರ ರೀ ಎಂಟ್ರಿಗೆ ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ. ನಾನು ಈ ಚಿತ್ರದಲ್ಲಿ ಮನೋಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದೇನೆ" ಎಂದರು.

ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಒಂದು ಹಾಡಿದೆ. ಸದ್ಯ ಸಿನಿಮಾ ರೀ ರೆಕಾರ್ಡಿಂಗ್​​​ ಕೆಲಸ ನಡೆಯುತ್ತಿದೆ‌. ಸಿನಿಮಾದಲ್ಲಿ ಹಿರಿಯ ಕಲಾವಿದರ ದಂಡೇ ಇದೆ. ಚಿತ್ರದ ಟೈಟಲ್ ನಿಂದಲೇ ಗಮನ ಸೆಳೆಯುತ್ತಿರುವ 'ತತ್ಸಮ ತದ್ಭವ' ಚಿತ್ರ ಮೇಘನಾ ರಾಜ್ ಅವರಿಗೆ ಒಳ್ಳೆ ಹೆಸರು ತಂದು ಕೊಡುವ ನಂಬಿಕೆ ಚಿತ್ರತಂಡಕ್ಕಿದೆ.

ಇದನ್ನೂ ಓದಿ:ಥಿಯೇಟರ್, ಒಟಿಟಿ, ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ 'ವರಾಹ ರೂಪಂ' ಹಾಡು ಬಳಸದಂತೆ ಕೋರ್ಟ್ ಆದೇಶ

ABOUT THE AUTHOR

...view details