ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಚಿತ್ರ 'ಭೋಲಾ ಶಂಕರ್' ಇಂದು ತೆರೆ ಕಂಡಿದೆ. ಮೆಹರ್ ರಮೇಶ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ನಟಿಸಿದ್ದಾರೆ. ಚಿರು ತಂಗಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಆಗಿದೆ.
ಫಸ್ಟ್ ಲುಕ್ನಿಂದ ಹಿಡಿದು ಟೀಸರ್, ಟ್ರೇಲರ್ವರೆಗೂ ಭಾರೀ ಕುತೂಹಲ ಮೂಡಿಸಿದ್ದ ಈ ಚಿತ್ರ ಇಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಥಿಯೇಟರ್ ಹೌಸ್ಫುಲ್ ಆಗಿದೆ. ನಿನ್ನೆಯಷ್ಟೇ ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಿಡುಗಡೆಯಾಗಿದ್ದು, ಇದಕ್ಕೆ ಪೈಪೋಟಿ ನೀಡಲು 'ಭೋಲಾ ಶಂಕರ್' ಸಿದ್ಧವಾಗಿದೆ. ಈಗಾಗಲೇ ಪ್ರೀಮಿಯರ್ ಶೋ ನೋಡಿರುವ ಸಿನಿ ಪ್ರೇಮಿಗಳು ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಪ್ರೇಕ್ಷಕರು ಹೇಳಿದ್ದೇನು?: ಪ್ರೀಮಿಯರ್ ಶೋ ನೋಡಿದ ಕೆಲ ಚಿರಂಜೀವಿ ಅಭಿಮಾನಿಗಳು ಈ ಸಿನಿಮಾ ಡೀಸೆಂಟ್ ಹಿಟ್ ಆಗಲಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಈ ಸಿನಿಮಾವನ್ನು ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ನೋಡಿದರೆ ಇಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊದಲಾರ್ಧ ಡೀಸೆಂಟ್ ಆಗಿದ್ದು, ದ್ವಿತೀಯಾರ್ಧದಲ್ಲಿ ಚಿರು ಅವರ ಕಾಮಿಡಿ ಟೈಮಿಂಗ್ ಸಖತ್ ಆಗಿದೆ. ಜೊತೆಗೆ ಕೀರ್ತಿ ಸುರೇಶ್ ಮತ್ತು ಚಿರು ನಡುವಣ ಭಾವನಾತ್ಮಕ ದೃಶ್ಯಗಳು ಚೆನ್ನಾಗಿವೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಮೊದಲಾರ್ಧಕ್ಕೆ ಹೋಲಿಸಿದರೆ, ದ್ವಿತೀಯಾರ್ಧ ತುಂಬಾ ಚೆನ್ನಾಗಿದೆ ಎನ್ನಲಾಗಿದೆ.