ಸಿನಿಮಾಗಳ ಸೀಕ್ವೆಲ್ ಬರುವುದು ಸಾಮಾನ್ಯ. ಕಿರುತೆರೆಯಲ್ಲಿ ಸೀಕ್ವೆಲ್ ತರುವುದು ಸುಲಭವಲ್ಲ. ಆದರೆ ಈ ಪ್ರಯತ್ನಕ್ಕೆ ನಿರ್ದೇಶಕ ಸೀತಾರಾಮ್ ಅವರು ಮುಂದಾಗಿದ್ದಾರೆ. ಬರೋಬ್ಬರಿ 25 ವರ್ಷಗಳ ಬಳಿಕ ಮಾಯಾಮೃಗ ಧಾರಾವಾಹಿಯ ಸೀಕ್ವೆಲ್ ಬರುತ್ತಿದೆ. ಮತ್ತೆ ಮಾಯಾಮೃಗ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ. 'ಸಿರಿ ಕನ್ನಡ' ವಾಹಿನಿಯಲ್ಲಿ ಅಕ್ಟೋಬರ್ ಮೂರನೇ ವಾರದಿಂದ ಧಾರಾವಾಹಿ ಪ್ರಸಾರವಾಗಲಿದೆ.
25 ವರ್ಷಗಳ ಬಳಿಕ ಧಾರಾವಾಹಿಯ ಮುಂದುವರೆದ ಭಾಗ ತರುವುದು ಅಷ್ಟು ಸುಲಭವಲ್ಲ. ಸಾಕಷ್ಟು ಚಾಲೆಂಜ್ಗಳು ಇರುತ್ತದೆ ಎಂಬುದು ಸೀತಾರಾಮ್ ಅವರ ಅಭಿಪ್ರಾಯ. ಈ ಕುರಿತು ಧಾರಾವಾಹಿ ತಂಡ ಕೆಲವು ವಿಷಯಗಳನ್ನು ಹಂಚಿಕೊಂಡಿದೆ.
ಧಾರಾವಾಹಿ ನೋಡುವವರ ಮನಸ್ಥಿತಿ ಬದಲಾಗಿದೆ. ಸಿರಿಕನ್ನಡದ ಸಂಜಯ್ ಶಿಂಧೆ ಅವರು ಈ ಪ್ರಪೋಸಲ್ ತಂದಾಗ ನನಗೆ ಭಯ ಆಯ್ತು. ಮಾಯಾಮೃಗಕ್ಕೆ ಸೀಕ್ವೆಲ್ ಹೇಗೆ ಎಂಬ ಚಿಂತೆ ಕಾಡಿತು. ನಮ್ಮ ಧಾರಾವಾಹಿಯಲ್ಲಿ ನಟಿಸಿದ್ದ ಅನೇಕರು ಈಗ ಬೇರೆ ಬೇರೆ ಕಡೆ ಇದ್ದಾರೆ. ಕೆಲವರು ಈ ಜಗತ್ತಿನಲ್ಲೇ ಇಲ್ಲ ಎಂದು ಮಾಯಮೃಗದ ಸೀಕ್ವೆಲ್ಗೆ ಇರುವ ಚಾಲೆಂಜ್ಗಳ ಬಗ್ಗೆ ಸೀತಾರಾಮ್ ವಿವರಿಸಿದರು.
ಆ ಕಾಲದಲ್ಲೇ ಆಗಿದ್ದರೆ ಅವರದ್ದೇ ಎರಡನೇ ಕಥೆ ಮಾಡಬಹುದಿತ್ತು. ಈಗ ಅವರ ಮುಂದಿನ ಜನರೇಷನ್ ಕಥೆ ಹೇಳಬೇಕು. ಸದ್ಯ ಜಗತ್ತು ಅತಿ ವೇಗದಲ್ಲಿ ಸಾಗುತ್ತಿದೆ. ಸಂಬಂಧಗಳ ಮೌಲ್ಯ ಕಡಿಮೆ ಆಗಿದೆ. ಹಣದ ವಿಚಾರದಲ್ಲೂ ನಾವು ಬದಲಾಗಿದ್ದೇವೆ. ಬ್ಯಾಂಕ್ಗೆ ಹೋಗುವ ಕೆಲಸವೇ ಇಲ್ಲ. ಮೊಬೈಲ್ನಲ್ಲೇ ಎಲ್ಲಾ ವ್ಯವಸ್ಥೆ ಇದೆ. ಹೀಗೆ ಸಾಕಷ್ಟು ಬದಲಾಗಿದೆ ಎಂದು ಹೇಳುವ ಮೂಲಕ ಸೀತಾರಾಮ್ ಅವರು ಮಾಯಾಮೃಗದ ಕಥೆ ಹೊಸ ಜಗತ್ತಿಗೆ ತಕ್ಕ ಹಾಗೆ ಇರುತ್ತದೆ ಎಂಬುದನ್ನು ತಿಳಿಸಿದರು.