'ನಾನು ಕೋ ಕೋ ಕೋಳಿಕ್ಕೆ ರಂಗ..' ಈ ಹಾಡು ಇಂದಿಗೂ ಎವರ್ಗ್ರೀನ್. ಇದೇ ಹಾಡಿನ ಸಾಲುಗಳನ್ನು ಇಟ್ಟುಕೊಂಡು ಸಿನಿಮಾವೊಂದು ಸ್ಯಾಂಡಲ್ವುಡ್ನಲ್ಲಿ ತಯಾರಾಗಿದೆ. ಮಾಸ್ಟರ್ ಆನಂದ್ ನಟಿಸುತ್ತಿರುವ ಈ ಚಿತ್ರದ ಹೆಸರು 'ನಾ ಕೋಳಿಕ್ಕೆ ರಂಗ'. ಇದೊಂದು ಹಳ್ಳಿ ಸೊಗಡಿನ ಕಥೆಯಾಗಿದ್ದು, ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಕೋಳಿ ಹಾಗೂ ರಂಗನ ಕಥೆ. ಶೂಟಿಂಗ್ ಮುಗಿಸಿರುವ ಚಿತ್ರ ಇದೀಗ ತೆರೆಗೆ ಬರಲು ಸಜ್ಜಾಗಿದೆ.
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಮಾಸ್ಟರ್ ಆನಂದ್, "ಕೊರೊನಾಗಿಂತ ಮೊದಲು ಚಿತ್ರ ಶುರುವಾಗಿತ್ತು. ಆ ನಂತರ ಸಮಸ್ಯೆ ಎದುರಾಯ್ತು. ಈಗ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. 'ಮರೆಯೋದುಂಟೆ ಮೈಸೂರ ದೊರೆಯ' ಎಂಬ ಹಾಡು ಈ ಚಿತ್ರದ ಹೈಲೆಟ್. ಮೈಸೂರು ದಸರಾ ಮತ್ತು ಮಹಾರಾಜರ ಕುರಿತಾದ ಹಾಡು ಇದಾಗಿದೆ. ದಸರಾ ವೇಳೆ ರಿಲೀಸ್ ಮಾಡಲು ನಿರ್ಧರಿಸಿದ್ದೇವೆ. ಕೋಳಿ ರಂಗ ಮತ್ತು ಆತನ ಅಮ್ಮನ ಕಥೆಯಿದೆ" ಎಂದು ತಿಳಿಸಿದರು.
"ಮಂಡ್ಯ ಭಾಗದಲ್ಲೇ ಶೇ. 90ರಷ್ಟು ಚಿತ್ರೀಕರಣ ಮಾಡಿದ್ದೇವೆ. ಅಲ್ಲಿನ ಸಂತೆ ಕಸಲಗೆರೆ ಎಂಬ ಊರಲ್ಲಿ ಶೂಟಿಂಗ್ ಆಗಿದ್ದು ವಿಶೇಷ. ಮಂಡ್ಯ, ಮೈಸೂರಿನ ಭಾಷಾ ಸೊಗಡಿದೆ. ಭವ್ಯಾ ಮೇಡಮ್ ತಾಯಿ ಪಾತ್ರ ಮಾಡಿದ್ದಾರೆ. ಅವರು ಹಿರಿಯ ಕಲಾವಿದರು. ನನ್ನ ತಾಯಿ ಪಾತ್ರ ಮಾಡಲು ಒಪ್ಪಿದ್ದೇ ಖುಷಿ. ಇದೊಂದು ರೀತಿ ಟ್ರಯಂಗಲ್ ಸ್ಟೋರಿ. ಹಾಗಂತ ಲವ್ ಸ್ಟೋರಿ ಅಲ್ಲ, ಕೋಳಿ ರಂಗ ಮತ್ತು ಅಮ್ಮನ ವಾತ್ಸಲ್ಯದ ಕಥೆ. ಕೋಳಿ ಮತ್ತು ಅಮ್ಮನ ಮೇಲೆ ರಂಗನಿಗೆ ಪ್ರೀತಿ. ಆದರೆ ಒಂದು ಸಾರಿ ಇವೆರಡರಲ್ಲಿ ಒಬ್ಬರನ್ನು ಆರಿಸಿಕೊಳ್ಳುವ ಪರಿಸ್ಥಿತಿ ಬಂದಾಗ ರಂಗ ಏನ್ ಮಾಡ್ತಾನೆ ಅನ್ನೋದು ಸಸ್ಪೆನ್ಸ್" ಎಂದು ಮಾಹಿತಿ ಹಂಚಿಕೊಂಡರು.
"ಇಲ್ಲಿ ಮನರಂಜನೆ ಜಾಸ್ತಿ ಇದೆ. ರಾಜೇಶ್ವರಿ ನಾಯಕಿಯಾಗಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿ ತಂಡ ಕೂಡ ಚಿತ್ರದಲ್ಲಿದೆ. ಉಳಿದಂತೆ ಹಾಸ್ಯ ಸನ್ನಿವೇಶದಲ್ಲಿ ಸ್ವತಂತ್ರ ನೀಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಕೂಡ ಸಿನಿಮಾಗೆ ಯಾವ ಕೊರತೆ ಇಲ್ಲದಂತೆ ಮಾಡಿದ್ದಾರೆ. ರಾಜು ಎಮ್ಮಿಗನೂರು ಸಂಗೀತ ಇದೆ. ಇದೇ ಮೊದಲ ಸಲ ಅಪ್ಪು ಅವರು ನನ್ನ ಸಿನಿಮಾದ ಇಂಟ್ರಡಕ್ಷನ್ ಸಾಂಗ್ ಹಾಡಿದ್ದಾರೆ. ಅದು ಮರೆಯದ ಅನುಭವ" ಎಂದರು.
ಬಳಿಕ ನಿರ್ದೇಶಕ ಗೊರವಾಲೆ ಮಹೇಶ್ ಮಾತನಾಡಿ, "ಇದು ನನ್ನ ಮೊದಲ ಚಿತ್ರ. ಮೌಢ್ಯಗಳ ಕುರಿತು ಕಥೆ ಸಾಗಲಿದೆ. ಒಂದೊಳ್ಳೆಯ ವಿಚಾರವನ್ನು ಸಿನಿಮಾ ಮೂಲಕ ಹೇಳ ಹೊರಟಿದ್ದೇನೆ. ಚಿತ್ರದಲ್ಲಿ ಮಾಸ್ಟರ್ ಆನಂದ್ ಅದ್ಭುತವಾಗಿ ನಟಿಸಿದ್ದಾರೆ. ಭವ್ಯಾ ಮೇಡಮ್ ತಾಯಿ ಪಾತ್ರದ ಮೂಲಕ ಭಾವುಕತೆ ಹೆಚ್ಚಿಸಿದ್ದಾರೆ. ಇಡೀ ಚಿತ್ರ ನಗಿಸುತ್ತಲೇ ಭಾವುಕತೆಗೆ ದೂಡುತ್ತದೆ" ಎಂದು ತಿಳಿಸಿದರು.