'ಆರ್ಆರ್ಆರ್' ಎಂಬ ಅದ್ಭುತ ಸಿನಿಮಾ ಇಡೀ ವಿಶ್ವದೆಲ್ಲೆಡೆ ಸದ್ದು ಮಾಡಿದೆ. ಈ ಚಿತ್ರದ ಬಳಿಕ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಖ್ಯಾತಿ ದುಪ್ಪಟ್ಟಾಗಿದೆ. ಸ್ಟಾರ್ ಡೈರೆಕ್ಷರ್ನ ಮುಂದಿನ ಸಿನಿಮಾಗಳ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಸೌತ್ ಸ್ಟಾರ್ ಹೀರೋ ಮಹೇಶ್ ಬಾಬು ಜೊತೆ ಕೈ ಜೋಡಿಸಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇವರಿಬ್ಬರ ಕಾಂಬೋದಲ್ಲಿ ಅದ್ಧೂರಿ ಪ್ಯಾನ್ ವರ್ಲ್ಡ್ ಸಿನಿಮಾ ನಿರ್ಮಾಣಗೊಳ್ಳಲಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಸುದ್ದಿಗಳು, ಅಂತೆ ಕಂತೆಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿವೆ.
ರಾಜಮೌಳಿ ಅವರ ತಂದೆ, ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಅವರು ಈ ಸಿನಿಮಾಗೆ ಕಥೆ ಒದಗಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಕುರಿತು ಆಸಕ್ತಿದಾಯಕ ವಿಚಾರವೊಂದನ್ನು ಬಹಿರಂಗಪಡಿಸಿದ್ದು, ಸಿನಿಪ್ರಿಯರು ಮತ್ತು ಮಹೇಶ್ ಬಾಬು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಈ ಚಿತ್ರಕ್ಕೆ ವಿಲನ್ ಆಗಿ ಟಾಲಿವುಡ್ ಸ್ಟಾರ್ ನಟ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮಾಸ್ ಮಹಾರಾಜ ಎಂದೇ ಖ್ಯಾತರಾಗಿರುವ ರವಿತೇಜ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ.
ರಾಜಮೌಳಿ ಹಾಗೂ ರವಿತೇಜ ಉತ್ತಮ ಸ್ನೇಹಿತರು. ಈಗಾಗಲೇ ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡಿ ಬ್ಲಾಕ್ಬಸ್ಟರ್ ಹಿಟ್ ಪಡೆದುಕೊಂಡಿದ್ದಾರೆ. ಇದೀಗ ರಾಜಮೌಳಿ, ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ಮಾಸ್ ಮಹಾರಾಜ ವಿಲನ್ ಆಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ 'ಟೈಗರ್' ಪ್ರಮೋಷನ್ನಲ್ಲಿ ಜಕ್ಕಣ್ಣ ಜೊತೆ ಸಿನಿಮಾ ಮಾಡಲು ಆಸಕ್ತಿ ಇದೆ ಎಂದು ರವಿತೇಜ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ಮಾಸ್ ಮಹಾರಾಜ ವಿಲನ್ ಪಾತ್ರ ಮಾಡಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಈ ವಿಚಾರ ಇಂಟರ್ನ್ನೆಟ್ನಲ್ಲಿ ಸದ್ದು ಮಾಡುತ್ತಿದೆ.