ಪೊಗರು ಸಿನಿಮಾ ಬಳಿಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೈ ವೊಲ್ಟೇಜ್ ಚಿತ್ರ ಮಾರ್ಟಿನ್. ಇಂದು ಮಾರ್ಟಿನ್ ಟೀಸರ್ ಚಿತ್ರಮಂದಿರದಲ್ಲಿ ಅನಾವರಣಗೊಂಡು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಸಂಜೆ ಸೋಷಿಯಲ್ ಮೀಡಿಯಾಗಳಲ್ಲಿ ಟೀಸರ್ ಲಭ್ಯವಿದೆ. ಎ.ಪಿ ಅರ್ಜುನ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಾಣ ಮಾಡಿದ್ದಾರೆ.
ಸಂಜೆ ರಿಲೀಸ್ ಆಗಲಿದೆ ಮಾರ್ಟಿನ್ ಟೀಸರ್ ವೀರೇಶ್ ಚಿತ್ರ ಮಂದಿರದಲ್ಲಿ ಟೀಸರ್ ರಿಲೀಸ್:ಪೋಸ್ಟರ್ನಿಂದಲೇ ದಕ್ಷಿಣ ಭಾರತದಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿರುವ ಮಾರ್ಟಿನ್ ಚಿತ್ರದ ಟೀಸರ್ ನೋಡಲು ಧ್ರುವ ಸರ್ಜಾ ಅಭಿಮಾನಿಗಳು ಚಿತ್ರಮಂದಿರಕ್ಕೆ ಜಮಾಯಿಸಿದ್ದರು. ಮಾಗಡಿ ರಸ್ತೆಯಲ್ಲಿರೋ ವೀರೇಶ್ ಚಿತ್ರ ಮಂದಿರದಲ್ಲಿ 1 ಗಂಟೆಗೆ ಮಾರ್ಟಿನ್ ಚಿತ್ರದ ಟೀಸರ್ ಅನಾವರಣಗೊಂಡಿದೆ. ಎರಡು ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಚಿತ್ರತಂಡದ ವಿಶ್ವಾಸ ಹೆಚ್ಚಿಸಿದೆ.
ಟೀಸರ್ ವೀಕ್ಷಿಸಲು ಟಿಕೆಟ್ ಖರೀದಿಸಿದ ಅಭಿಮಾನಿಗಳು: ಮಾರ್ಟಿನ್ ಚಿತ್ರದ ಟೀಸರ್ ವೀಕ್ಷಣೆಗೆ ಪೈಡ್ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಒಂದು ಟಿಕೆಟ್ ಬೆಲೆ 80 - 100 ರೂಪಾಯಿ ಇತ್ತು. ಈ ಟೆಕೆಟ್ಗಳನ್ನು ಅಭಿಮಾನಿಗಳು ಎರಡು ದಿನಗಳ ಮೊದಲೇ ಖರೀದಿಸಿದ್ದರು. ಮಾರ್ಟಿನ್ ಚಿತ್ರ ಕನ್ನಡದ ಭರ್ಜರಿ ಆ್ಯಕ್ಷನ್ ಸಿನಿಮಾ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದೆ. ಈ ಚಿತ್ರದ ಕ್ಲೈಮ್ಯಾಕ್ಸ್ ಬಹಳ ಅದ್ಧೂರಿಯಾಗಿದೆ ಅನ್ನೋದು ನಿರ್ಮಾಪಕ ಉದಯ್ ಕೆ ಮೆಹ್ತಾ ಹಾಗೂ ನಿರ್ದೇಶಕ ಎ.ಪಿ ಅರ್ಜುನ್ ಹೇಳುತ್ತಿರುವ ಮಾತು. ಬೆಳಗ್ಗ 10.30ಕ್ಕೆ ರಾಜಾಜಿನಗರದ ಕೆಂಪೇಗೌಡ ಸಮುದಾಯ ಭವನದಿಂದ ಹೊರಟ ನಟ ಧ್ರುವ ಸರ್ಜಾ, ನಿರ್ದೇಶಕ ಎ.ಪಿ ಅರ್ಜುನ್, ನಿರ್ಮಾಪಕ ಉದಯ್ ಕೆ ಮೆಹ್ತಾ ಸೇರಿದಂತೆ ಇಡೀ ಮಾರ್ಟಿನ್ ಚಿತ್ರತಂಡ ಮೆರವಣಿಗೆ ಮೂಲಕ ಒಂದು ಗಂಟೆಗೆ ವೀರೇಶ್ ಚಿತ್ರಮಂದಿರಕ್ಕೆ ಆಗಮಿಸಿದೆ.
ಟೀಸರ್ ಪೋಸ್ಟರ್ ಪ್ರಕಾರ, ಮಾರ್ಟಿನ್ ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಸಿನಿಮಾದಲ್ಲಿ ಭರ್ಜರಿ ಸಾಹಸಮಯ ದೃಶ್ಯಗಳು ಇರಲಿದೆ. ನಟ ಧ್ರುವ ಸರ್ಜಾ ನಟನೆ ಮೇಲಿನ ನಿರೀಕ್ಷೆಯೂ ಹೆಚ್ಚಿದೆ. ಹಾಲಿವುಡ್ ಆ್ಯಕ್ಷನ್ ಸಿನಿಮಾ ನೋಡಿದ ಅನುಭವ ಮಾರ್ಟಿನ್ ಚಿತ್ರ ಕೊಡಲಿದೆ ಅನ್ನೋದು ನಿರ್ದೇಶಕ ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಅವರ ವಿಶ್ವಾಸದ ಮಾತು.
ಇನ್ನೂ ಮಾರ್ಟಿನ್ ಚಿತ್ರದ ಟೀಸರ್ಗಾಗಿ ಟಿಕೆಟ್ ಇಟ್ಟಿರುವುದರ ಹಿಂದೆ ನಿರ್ಮಾಪಕ ಉದಯ್ ಕೆ ಮೆಹ್ತಾ ಅವರ ಸಾಮಾಜಿಕ ಕಳಕಳಿ ಇದೆ. ಟೀಸರ್ ನೋಡಲು ಟಿಕೆಟ್ ರೂಪದಲ್ಲಿ ಹಣ ನಿಗದಿ ಮಾಡಿದ್ದು, ಬಂದ ಹಣವನ್ನು ನಾನು ಬಳಸಿಕೊಳ್ಳುತ್ತಿಲ್ಲ. ಆ ಹಣವನ್ನು ನಮ್ಮ ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಗೋ ಶಾಲೆಗಳಿಗೆ ಕೊಡುತ್ತಿದ್ದೇವೆ ಅಂತಾ ನಿರ್ಮಾಪಕ ಉದಯ್ ಕೆ ಮೆಹ್ತಾ ತಿಳಿಸಿದ್ದಾರೆ. ಅವರ ಸಾಮಾಜಿಕ ಕಾಳಜಿ ಬಗ್ಗೆ ಮೆಚ್ಚಲೇಬೇಕು.
ಇದನ್ನೂ ಓದಿ:ಇಂದು ಒಟಿಟಿ ವೇದಿಕೆಯಲ್ಲಿ ಸೂಪರ್ ಹಿಟ್ ಸಿನಿಮಾ 'ವೀರಸಿಂಹ ರೆಡ್ಡಿ' ರಿಲೀಸ್
ಇಂದು ಸಂಜೆ 6ಕ್ಕೆ ಬೆಂಗಳೂರಿನ ಮಾಲ್ ಒಂದರಲ್ಲಿ ಮಾರ್ಟಿನ್ ಚಿತ್ರದ ಪ್ರೆಸ್ ಮೀಟ್ ನಡೆಯಲಿದೆ. ಆ ವೇಳೆಯೇ ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಅನಾವರಣಗೊಳ್ಳಲಿದೆ . ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಕ್ಯಾಮರಾ ವರ್ಕ್, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತವಿದೆ. ಅರುಣ್ ಬಾಲಾಜಿ ಮತ್ತು ಸ್ವಾಮಿ ಬರೆದ ಕಥೆಗೆ ಡೈರೆಕ್ಟರ್ ಎ.ಪಿ.ಅರ್ಜುನ್ ಮತ್ತು ಸ್ವಾಮಿ ಚಿತ್ರಕಥೆ ಮಾಡಿಕೊಂಡಿದ್ದಾರೆ. ಪ್ರಶಾಂತ್ ರಾಜಪ್ಪ ಡೈಲಾಗ್ ಬರೆದು ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಡೈಲಾಗ್ ಹೆಚ್ಚೇನೂ ಇಲ್ಲ. 10ಕ್ಕೆ ಒಂದು ಮಾತು ಅನ್ನುವ ರೀತಿಯಲ್ಲಿ ಇರುತ್ತೆ ಅಂತಾ ಧ್ರುವ ಸರ್ಜಾ ಹೇಳಿದ್ದಾರೆ. ಒಟ್ಟಿನಲ್ಲಿ ಕಬ್ಜ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ಮಾರ್ಟಿನ್ ಚಿತ್ರ ಬಿಡುಗಡೆ ಮೊದಲೇ ಸಾಕಷ್ಟು ವಿಷಯಗಳಿಗೆ ಟಾಕ್ ಆಗುತ್ತಿದೆ.