ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ ಎಂದರೆ ಅದು ವಿಜಯ್ ರಾಘವೇಂದ್ರ. ಪ್ರಸ್ತುತ ರಿಯಾಲಿಟಿ ಶೋ ಅಂತಾ ಬ್ಯುಸಿಯಾಗಿರೋ ವಿಜಯ್ ರಾಘವೇಂದ್ರ ನಟನೆಯ 'ಮರೀಚಿ' ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘಟದಲ್ಲಿ ಮರೀಚಿ ಟ್ರೇಲರ್ ಅನಾವರಣಗೊಳಿಸಲಾಯಿತು. ಈವೆಂಟ್ನಲ್ಲಿ ಚಿತ್ರತಂಡ ತಮ್ಮ ಅನುಭವಗಳನ್ನು ಹಂಚಿಕೊಂಡಿತು.
ನಟ ವಿಜಯ್ ರಾಘವೇಂದ್ರ ಮಾತನಾಡಿ, ಮರೀಚಿ ಸಿನಿಮಾದ ಟೀಸರ್ ಹಾಗೂ ಹಾಡುಗಳು ಜನರನ್ನು ತಲುಪಿವೆ. ಟ್ರೇಲರ್ ಕೂಡ ಬಹಳ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರಕ್ಕಾಗಿ ತಾಂತ್ರಿಕ ಸಿದ್ಧತೆ ಮಾಡಿಕೊಂಡು, ಚಿತ್ರೀಕರಿಸಲಾಗಿದೆ. ಸಿನಿಮಾವನ್ನು ಬಹಳ ಪ್ರೀತಿಸುವ ನಿರ್ಮಾಪಕರು, ನಿರ್ದೇಶಕರು ಇಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಚಿತ್ರದ ಮೇಲೆ ಇರಲಿ ಎಂದು ಕೇಳಿಕೊಂಡರು.
ನಿರ್ದೇಶಕ ಕಂ ನಿರ್ಮಾಪಕ ಸಿದ್ಧ್ರುವ್ ಮಾತನಾಡಿ, ಪೊಲೀಸ್ ಆಫೀಸರ್ ಲೈಫ್ ಸ್ಟೈಲ್ ನಮ್ಮ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕನ ಕನಸನ್ನು ನನಸು ಮಾಡಲು ತಾಂತ್ರಿಕ ವರ್ಗ, ಕಲಾವಿದರ ತಂಡ ಬೆಂಬಲ ನೀಡಬೇಕು. ನಾನು ಈ ವಿಚಾರದಲ್ಲಿ ಅದೃಷ್ಟವಂತ. ನನ್ನ ಚಿತ್ರತಂಡ ಆರಂಭದಿಂದ ಇಲ್ಲಿವರೆಗೂ ನನಗೆ ಬೆಂಬಲವಾಗಿ ನಿಂತಿದೆ. ಹೊಸ ನಿರ್ದೇಶಕನಿಗೆ ಎಲ್ಲರೂ ಸಪೋರ್ಟ್ ಮಾಡಿದ್ದಾರೆ. ಮರೀಚಿ ಬಗ್ಗೆ ಹೇಳುವುದಾರೆ ಹುಟ್ಟುತ್ತಲೇ ಯಾರೂ ಕೂಡ ಕ್ರೈಮ್ ಮಾಡಬೇಕು ಅಂದುಕೊಂಡಿರೋಲ್ಲ. ಆದರೆ ಪರಿಸ್ಥಿತಿ ಮನುಷ್ಯನನ್ನು ಬದಲಾಯಿಸುತ್ತವೆ. ತಂತ್ರಜ್ಞಾನ ನಕಾರಾತ್ಮಕ ಮನಸ್ಸಿಗೆ ಸಿಕ್ಕಾಗ ಏನಾಗುತ್ತದೆ ಅನ್ನೋದನ್ನು ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ ಎಂದು ತಿಳಿಸಿದರು.