'ಗೊಂಬೆಗಳ ಲವ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ನಟ ಅರುಣ್ ಕುಮಾರ್ ಇದೀಗ ನಿರ್ದೇಶನಕ್ಕಿಳಿದಿದ್ದಾರೆ. ಅವರ ಚೊಚ್ಚಲ ಹೆಜ್ಜೆಗೆ 'ನೆಲ್ಸನ್' ಎಂಬ ಶೀರ್ಷಿಕೆ ಇಡಲಾಗಿದ್ದು, 'ರಕ್ತದಲ್ಲಿ ನೆಂದ ದೇವರಕಾಡು' ಎಂಬ ಅಡಿ ಬರಹವಿದೆ. ಇತ್ತೀಚೆಗೆ ಟೀಸರ್ ಅನ್ನು ಎಂಎಂ ಲೆಗಸಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಟೀಸರ್ನಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ಆ್ಯಂಗ್ರಿ ಯಂಗ್‌ಮ್ಯಾನ್ ಅವತಾರದಲ್ಲಿ ಅಬ್ಬರಿಸಿದ್ದಾರೆ.
ಟೀಸರ್ ಬಿಡುಗಡೆಗೊಳಿಸಿ ಮಾತನಾಡಿದ ನಟ ಉಪೇಂದ್ರ, "ಟೈಗರ್ ಹವಾ ಆಗಲೂ ಇತ್ತು. ಈಗಲೂ ಇರುತ್ತೇ, ಮುಂದೆಯೂ ಇರುತ್ತದೆ. ನಿಮ್ಮ ತಂದೆಯ ಸಿನಿಮಾಗೆ ಡೈಲಾಗ್ ಬರೆದಿದ್ದೆ. ಇವತ್ತು ನಿಮ್ಮ ಟೀಸರ್ ಲಾಂಚ್ ಮಾಡಲು ನಿಮ್ಮ ತಂದೆ ಆಶೀರ್ವಾದ ಮಾಡಿದ್ದಾರೆ. ಟೀಸರ್ ಬಗ್ಗೆ ಹೇಳೋದೇನಿಲ್ಲ. ಎಲ್ಲವೂ ಎಕ್ಸ್ಟ್ರಾಡಿನರಿಯಾಗಿದೆ. ಮೇಕಿಂಗ್, ಗೆಟಪ್ ಸೂಪರ್. ಸಬ್ಜೆಕ್ಟ್ ಬೇರೆ ತರ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಲಿ" ಎಂದು ಶುಭ ಹಾರೈಸಿದರು.
ನಟ ವಿನೋದ್ ಪ್ರಭಾಕರ್ ಮಾತನಾಡಿ, "ಉಪೇಂದ್ರ ಅಣ್ಣ ಟೀಸರ್ ನೋಡಿ ತುಂಬಾ ಖುಷಿಪಟ್ಟರು. ದರ್ಶನ್ ಸರ್ ಕೂಡ ಟೀಸರ್ ನೋಡಿದರು. ಈ ತರಹದ ಸಿನಿಮಾ ಮಾಡಲು ಧೈರ್ಯ ಬೇಕು. ಶ್ರೀರಾಮ್ ಸರ್ ನಿಮಗೆ ಧನ್ಯವಾದ. ನಿಮ್ಮ ಮೇಲೆ ನಮಗೆ ಕಾನ್ಫಿಡೆನ್ಸ್ ಇದೆ. ಅರುಣ್ ಕುಮಾರ್ ಅವರು ಬಹಳಷ್ಟು ಫ್ಯಾಷನ್ ಇರುವ ವ್ಯಕ್ತಿ. ಭರತ್ ಸರ್ ವಂಡರ್ಫುಲ್ ಮ್ಯೂಸಿಕ್. ಸಿನಿಮಾ ಬಗ್ಗೆ ಮುಂದೆ ಮಾತಾಡ್ತೀನಿ. ತೆರೆ ಹಿಂದೆ ಬಹಳಷ್ಟು ಜನ ಕೆಲಸ ಮಾಡಿದ್ದಾರೆ" ಎಂದರು.
"ಲಾಕ್ಡೌನ್ ಆದ್ಮೇಲೆ ಹಸಿವು, ಅಸಹಾಯಕತೆ ಸಮಯದಲ್ಲಿ 'ನೆಲ್ಸನ್' ಹುಟ್ಟಿಕೊಂಡಿದ್ದು. ಬರೆಯುತ್ತಾ, ಬರೆಯುತ್ತಾ ತುಂಬಾ ಚೆನ್ನಾಗಿ ಕಥೆ ಬೆಳೆಯಿತು. ಮಲಯಾಳಂ, ತಮಿಳು ಇಂಡಸ್ಟ್ರಿಗೆ ಈ ಕಥೆ ಮಾಡೋಣ ಅಂತಿದ್ದೆ. ಆದರೆ ನನಗೆ ತೃಪ್ತಿಯಾಗಲಿಲ್ಲ. ಇಲ್ಲೇ ಏನಾದರೂ ಆಗಬೇಕು ಅದಕ್ಕೆ ಬಂದೆ. ಸ್ನೇಹಿತರ ಮೂಲಕ ನಿರ್ಮಾಪಕರು ಸಿಕ್ಕಿದ್ರು. ನಂಬಿಕೆ ಹುಟ್ಟಿಕೊಂಡಿತು. ಇದುವರೆಗೆ ನನ್ನ ನಂಬಿದ್ದು ಶ್ರೀರಾಮ್ ಸರ್. ನನ್ನ ಟೀಂ ನನ್ನ ಬೆನ್ನೆಲುಬಾಗಿ ನಿಂತರು. ಸಿನಿಮಾ ಈ ಹಂತಕ್ಕೆ ಬರಲು ನನ್ನ ಟೆಕ್ನಿಕಲ್ ಟೀಂ ಬೆಂಬಲವಿದೆ. ವಿನೋದ್ ಸರ್ ಡೆಡಿಕೇಷನ್ ನೋಡಿ ಭಯ ಆಯಿತು. ವಿನೋದ್ ಸರ್ ಸಪೋರ್ಟ್ ತುಂಬಾ ದೊಡ್ಡದಿದೆ. ಸ್ಕ್ರೀನ್ ಪ್ಲೇ, ಕಥೆ ತುಂಬಾ ಸ್ಟ್ರಾಂಗ್ ಆಗಿದೆ" ಎಂದು ನಿರ್ದೇಶಕ ಅರುಣ್ ಕುಮಾರ್ ತಿಳಿಸಿದರು.