ಗಾಳಿಪಟ 2 ಚಿತ್ರದಲ್ಲಿ ಅನಂತ್ ನಾಗ್, ಗಣೇಶ್, ದಿಗಂತ್, ರಂಗಾಯಣ ರಘು ಅವರಂತಹ ಪ್ರತಿಭಾವಂತ ಕಲಾವಿದರ ನಡುವೆ ಗಮನ ಸೆಳೆಯುವ ಮತ್ತೊಬ್ಬ ತಾರೆ ಅಂದ್ರೆ ಅದು ವೈಭವಿ ಶಾಂಡಿಲ್ಯ. ಗಣೇಶ್ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ವೈಭವಿ ಮೂಲತಃ ಮರಾಠಿಯವರು. ಈಗಾಗಲೇ ಕೆಲವು ಮರಾಠಿ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಕೆಲವು ವರ್ಷಗಳ ಹಿಂದೆ 'ರಾಜ್-ವಿಷ್ಣು' ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ 'G-2' ಚಿತ್ರದ ಮೂಲಕ ವಾಪಸಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಅಭಿನಯ ಚೆಲುವಿನಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ.
ಗಾಳಿಪಟ 2ರ ಶ್ವೇತಾ ಪಾತ್ರ ತಮ್ಮ ವೃತ್ತಿಜೀವನದಲ್ಲಿ ಬಹಳ ವಿಭಿನ್ನವಾದದ್ದು ಎನ್ನುವ ವೈಭವಿ, 'ನಾನು ನಿಜ ಜೀವನದಲ್ಲಿ ಬಹಳ ಮಾತನಾಡುತ್ತೇನೆ. ಆದರೆ, ಈ ಚಿತ್ರದಲ್ಲಿ ನನಗೆ ಅದಕ್ಕೆ ವಿರುದ್ಧವಾದ ಪಾತ್ರ. ಇಲ್ಲಿ ಮಾತು ಕಡಿಮೆ. ಅಷ್ಟೇ ಅಲ್ಲ, ಪ್ರಬುದ್ಧವಾಗಿರುವ ಜೊತೆಗೆ ಎಮೋಷನಲ್ ಆಗಿರುವೆ. ಹಾಗಾಗಿ, ಶ್ವೇತಾ ಪಾತ್ರ ಬಹಳ ಕಷ್ಟವಾಯಿತು. ಇಡೀ ಚಿತ್ರತಂಡದ ಸಹಾಯದೊಂದಿಗೆ ಪಾತ್ರ ನಿರ್ವಹಿಸಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ನಿಜಕ್ಕೂ ಸವಾಲಿನದ್ದು. ಅಷ್ಟು ದೊಡ್ಡ ರಿಸ್ಕ್ ತೆಗೆದುಕೊಂಡು ನಟಿಸಿದ್ದು ಫಲ ನೀಡಿತು. ಜನರ ಪ್ರೀತಿ ನೋಡಿದಾಗ ಬಹಳ ಖುಷಿ ಆಗುತ್ತದೆ' ಎಂದರು.
'ಚಿತ್ರದಲ್ಲಿ ತಮ್ಮ ಪಾತ್ರ ಮತ್ತು ಅಭಿನಯವನ್ನು ಜನ ಗುರುತಿಸಿ ಮಾತನಾಡುವಾಗ ಹೃದಯ ತುಂಬಿ ಬರುತ್ತದೆ. ನಾನು ನನ್ನ ಕುಟುಂಬದವರೊಡನೆ ಮುಂಬೈನಲ್ಲಿ ಗಾಳಿಪಟ 2 ನೋಡುವುದಕ್ಕೆ ಹೋಗಿದ್ದೆ. ಚಿತ್ರ ನೋಡುವುದಕ್ಕೆ ಜನ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು ಮತ್ತು ಅವರೆಲ್ಲರೂ ನನ್ನನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿಸಿದರು. ಇತ್ತೀಚೆಗೆ ಉಡುಪಿ, ಮಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲೂ ನನ್ನನ್ನು ಗಾಳಿಪಟ 2 ಹುಡುಗಿ ಎಂದು ಗುರುತಿಸಿ ಸೆಲ್ಫಿ ತೆಗೆಸಿಕೊಂಡಿದ್ದನ್ನು ಮರೆಯುವಂತಿಲ್ಲ' ಎಂದು ತಮ್ಮ ಕನ್ನಡ ಸಿನಿ ಜರ್ನಿಯ ಒಂದೊಂದೇ ಮೆಟ್ಟಿಲುಗಳ ಪರಿಚಯ ಮಾಡಿಕೊಟ್ಟರು.