ಪ್ರೀತಿಯ ಚೌಕಟ್ಟಿನೊಳಗೆ ಸಂಬಂಧಗಳ ಪಯಣ. ಪಯಣದ ದಾರಿಯಲ್ಲಿ ಬದುಕಿನ ಮೌಲ್ಯಗಳ ಅನಾವರಣ. ಈ ರೀತಿಯ ವಿಭಿನ್ನ ಕಥೆಯೊಂದಿಗೆ ನಿರ್ದೇಶಕ ಯತಿರಾಜ್ ಸಿನಿಮಾ ಪ್ರೇಮಿಗಳ ಮುಂದೆ ಬಂದಿದ್ದಾರೆ. ಹೌದು, ಕನ್ನಡ ಚಿತ್ರರಂಗದಲ್ಲಿ ಪತ್ರಕರ್ತನಾಗಿ, ನಟನಾಗಿ ಸೈ ಎನ್ನಿಸಿಕೊಂಡಿರುವ ಯತಿರಾಜ್ ಮತ್ತೊಂದು ರೊಮ್ಯಾಂಟಿಕ್ ಚಿತ್ರದೊಂದಿಗೆ ಬಂದಿದ್ದಾರೆ. 'ಸಂಜು' ಚಿತ್ರದ ಟೈಟಲ್.
ಈ ಸಂಜು ಚಿತ್ರದ ಕುರಿತಾಗಿ ಮಾತನಾಡಿದ ನಿರ್ದೇಶಕ ಯತಿರಾಜ್, ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳ ತಲ್ಲಣಗಳಿವೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ತಕ್ಷಣದ ನಿರ್ಧಾರಗಳು ನಮ್ಮ ಬದುಕಿನಲ್ಲಿ ಎಷ್ಟೆಲ್ಲಾ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಮಡಿಕೇರಿ ಮತ್ತು ವಿರಾಜಪೇಟೆ ಸುತ್ತ ಮುತ್ತಲಿನ ಹಸಿರಿನ ಪರಿಸರದಲ್ಲಿ ಕಟ್ಟಿ ಕೊಡುವ ಪ್ರಯತ್ನ ಮಾಡಲಾಗುವುದು. ಅದಕ್ಕಾಗಿ ಮೂರ್ನಾಡುವಿನಲ್ಲಿ ಬಸ್ ಸ್ಟಾಪ್ ಮತ್ತು ಟೀ ಶಾಪ್ ಸೆಟ್ ಕೂಡ ಹಾಕಲಾಗುತ್ತಿದೆ ಎಂದರು.
ಮನ್ವೀತ್ ಚಿತ್ರದ ನಾಯಕ. ಈ ಹಿಂದೆ 'ಅ್ಯಂಗರ್' ಎನ್ನುವ ಸಿನಿಮಾದಲ್ಲಿ ನಟಿಸಿದ್ದ ಅವರಿಗೆ 'ಸಂಜು' ಎರಡನೇ ಚಿತ್ರ. ರಂಗಭೂಮಿಯ ನಂಟಿದ್ದರೂ ಪಾತ್ರದ ಪರಕಾಯ ಪ್ರವೇಶ ಪಡೆಯಲು ನಿರ್ದೇಶಕರ ಜೊತೆಗೆ ಸತತ ತಾಲೀಮು ನಡೆಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು. ಆರಂಭದಲ್ಲಿ ನಾಟಕವೊಂದರ ಡೈಲಾಗ್ ಹೊಡೆಯುವ ಮೂಲಕ ವೇದಿಕೆ ಏರಿ ಮನ್ವೀತ್ ಎಲ್ಲರ ಗಮನ ಸೆಳೆದರು.
ರೋಜ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದ ರೇಖಾದಾಸ್ ಪುತ್ರಿ ಶ್ರಾವ್ಯ ಮಾತನಾಡಿ, ಸಂಜು ಚಿತ್ರದ ಮೂಲಕ ಹೊಸ ಭರವಸೆಯೊಂದಿಗೆ ಈ ಚಿತ್ರದಲ್ಲಿ ಸರಸ್ವತಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮೊದಲ ಹದಿನೈದು ದೃಶ್ಯಗಳಲ್ಲಿ ನನಗೆ ಮಾತುಗಳಿಲ್ಲ. ಕೇವಲ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಬೇಕಿದೆ. ಇದೊಂಥರ ವಿಭಿನ್ನ ಪ್ರಯೋಗ ಎಂದರು.