ಚೆನ್ನೈ (ತಮಿಳುನಾಡು): ಲಿಯೋ ಸಹನಟಿ ತ್ರಿಶಾ ಕೃಷ್ಣನ್ ಬಗ್ಗೆ ಮಾಡಿದ್ದ ಕಾಮೆಂಟ್‌ಗಳಿಂದಾಗಿ ನಟ ಮನ್ಸೂರ್ ಅಲಿ ಖಾನ್ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಕಳೆದೊಂದು ವಾರದಿಂದ ದಕ್ಷಿಣ ಚಿತ್ರರಂಗದಲ್ಲಿ ಮನ್ಸೂರ್ ಅಲಿ ಖಾನ್ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ. ಸಿನಿಮಾ ವಲಯದ ಖ್ಯಾತನಾಮರು ನಟನ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಕಾನೂನು ಪ್ರಕ್ರಿಯೆ ಕೂಡ ಆರಂಭವಾಯ್ತು. ಪ್ರಕರಣ ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ಮನ್ಸೂರ್ ಅಲಿ ಖಾನ್ ಸಾರ್ವಜನಿಕವಾಗಿ ನಟಿಯಲ್ಲಿ ಕ್ಷಮೆಯಾಚಿಸಿದ್ದರು. ಅದಾಗ್ಯೂ, ತ್ರಿಶಾ ಕೃಷ್ಣನ್, ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯೆ ಖುಷ್ಬೂ ಸುಂದರ್ ಮತ್ತು ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಮನ್ಸೂರ್ ಘೋಷಿಸಿದ್ದಾರೆ.
ಇಂದು ನಟನ ತಂಡ ಹೇಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ, ಮನ್ಸೂರ್ ಅಲಿ ಖಾನ್ ಅವರು ಮಾನನಷ್ಟ ಮೊಕದ್ದಮೆ ಹೂಡುವ ಉದ್ದೇಶವನ್ನು ವಿವರಿಸಲಾಗಿದೆ. ತಮ್ಮ ವಕೀಲರಾದ ಗುರು ಧನಂಜೇಯನ್ ಅವರ ಮೂಲಕ ಕಾನೂನು ಕ್ರಮ ಕೈಗೊಳ್ಳುವ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ನವೆಂಬರ್ 11 ರಂದು ನಡೆದ ಮಾಧ್ಯಮಗೋಷ್ಟಿಯ ಮೂಲ ವಿಡಿಯೋವನ್ನೂ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ. ನಟಿ ತ್ರಿಶಾ ಅವರ ಬಗ್ಗೆ ತಮ್ಮ ಕಾಮೆಂಟ್‌ಗಳನ್ನು ತಪ್ಪಾಗಿ ಪ್ರತಿನಿಧಿಸುವ ವಿಡಿಯೋ ವೈರಲ್ ಆಗಿದೆ ಎಂದು ಉಲ್ಲೇಖಿಸಿದ್ದಾರೆ. ಹೆಚ್ಚುವರಿ ಸಾಕ್ಷ್ಯಗಳೊಂದಿಗೆ ಪ್ರಕರಣವನ್ನು ದಾಖಲಿಸುವ ಯೋಜನೆಯನ್ನು ಖಾನ್ ಪ್ರಸ್ತಾಪಿಸಿದ್ದಾರೆ.
ನಟಿ ತ್ರಿಶಾ ಕೃಷ್ಣನ್ ಕುರಿತ ಮನ್ಸೂರ್ ಅಲಿ ಖಾನ್ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಸ್ವತಃ ತ್ರಿಶಾ ಕೃಷ್ಣನ್ ಅವರೇ ಅಸಮಾಧಾನ ಹೊರಹಾಕಿದ ಹಿನ್ನೆಲೆ ಪ್ರಕರಣ ತೀವ್ರ ಸ್ವರೂಪ ಪಡೆಯಿತು. ನಂತರ ಖುಷ್ಬೂ ಸುಂದರ್, ನಿರ್ದೇಶಕ ಲೋಕೇಶ್ ಕನಕರಾಜ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವರು ನಟನ ವಿರುದ್ಧ ಅಸಮಾಧಾನ ಹೊರಹಾಕಿ ಸೋಷಿಯಲ್ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದರು. ಇದೀಗ ತ್ರಿಶಾ ಕೃಷ್ಣನ್, ಖುಷ್ಬೂ ಸುಂದರ್, ಚಿರಂಜೀವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪೋಷಕ ನಟ ಮನ್ಸೂರ್ ಅಲಿ ಖಾನ್ ತಯಾರಿ ನಡೆಸುತ್ತಿದ್ದಾರೆ.