ದಕ್ಷಿಣ ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ಹೇಳಿಕೆ ನೀಡಿದ ನಟ ಮನ್ಸೂರ್ ಅಲಿ ಖಾನ್ ವಿವಾದಕ್ಕೆ ಸಿಲುಕಿದ್ದರು. ಚಿತ್ರರಂಗದ ಹಲವರು ನಟನ ಹೇಳಿಕೆ ಖಂಡಿಸಿದ್ದರು. ವಿವಾದ ಭುಗಿಲೆದ್ದ ಬೆನ್ನಲ್ಲೇ ನಟ ಸಾಮಾಜಿಕ ಜಾಲತಾಣದಲ್ಲಿ ನಟಿ ಬಳಿ ಕ್ಷಮೆಯಾಚಿಸಿದ್ದರು. ನಟಿ ಕೂಡ ಪರೋಕ್ಷವಾಗಿ ಕ್ಷಮಿಸಿದಂತೆ ತೋರಿತ್ತು. ಆದರೆ ಕಳೆದ ಶುಕ್ರವಾರ ನಟ ಮನ್ಸೂರ್ ಅಲಿ ಖಾನ್ ಅವರು ತ್ರಿಶಾ ಕೃಷ್ಣನ್, ನಟಿ-ರಾಜಕಾರಣಿ ಖುಷ್ಬೂ ಸುಂದರ್ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ತ್ರಿಶಾ, ಚಿರಂಜೀವಿ ಮತ್ತು ಖುಷ್ಬೂ ಸುಂದರ್ ಅವರಿಂದ 1 ಕೋಟಿ ರೂ.ನ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದ ನಟ ಮನ್ಸೂರ್ ಅಲಿ ಖಾನ್ ಅವರಿಗೆ ಮದ್ರಾಸ್ ಹೈಕೋರ್ಟ್ ಛೀಮಾರಿ ಹಾಕಿದೆ. ತಮ್ಮ ಹೇಳಿಕೆಯನ್ನು ಸೂಕ್ತವಾಗಿ ಪರಿಶೀಲಿಸದೇ ಈ ಮೂವರು ಸಾರ್ವಜನಿಕವಾಗಿ ನನ್ನ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ, ಮನ್ಸೂರ್ ಅಲಿ ಖಾನ್ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು. ನಿನ್ನೆ ಈ ಅರ್ಜಿ ವಿಚಾರಣೆಗೆ ಒಳಗಾಗಿ ನಟನ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ತ್ರಿಶಾ ಬದಲು ಮನ್ಸೂರ್ ಅಲಿಖಾನ್ ಅವರೇಕೆ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ಗೊಂದಲಕ್ಕೊಳಗಾಗಿದ್ದರು. "ಅವರು ಅರೆಸ್ಟ್ ಆಗೋದನ್ನು ತಪ್ಪಿಸೋ ಸಲುವಾಗಿ ಕ್ಷಮೆಯಾಚಿಸಿದ್ದಾರೆಯೇ?. ವಾಸ್ತವವಾಗಿ, ತ್ರಿಶಾ ಕೃಷ್ಣನ್ ಅವರು ತಮ್ಮ ಮಾನಹಾನಿಗಾಗಿ ಮೊಕದ್ದಮೆ ಹೂಡಬೇಕಾಗಿತ್ತು. ಆದರೆ ನಟ ಯಾವ ಆಧಾರದ ಮೇಲೆ ಮೊಕದ್ದಮೆ ಹೂಡಿದ್ದಾರೆ?" ಎಂದು ನ್ಯಾಯಾಲಯ ಪ್ರಶ್ನಿಸಿದೆ. ಅಲ್ಲದೇ, ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ಮನ್ಸೂರ್ಗೆ ಸಲಹೆ ನೀಡುವಂತೆ ಅವರ ವಕೀಲರಿಗೆ ಸಲಹೆ ಕೂಡಾ ನೀಡಿದೆ. ಈ ಮೊಕದ್ದಮೆಗೆ ಪ್ರತಿಕ್ರಿಯಿಸುವಂತೆ ತ್ರಿಶಾ, ಚಿರಂಜೀವಿ ಮತ್ತು ಖುಷ್ಬೂ ಅವರಿಗೂ ನ್ಯಾಯಮೂರ್ತಿ ಸೂಚಿಸಿದ್ದಾರೆ.