ಚೆನ್ನೈ (ತಮಿಳುನಾಡು): ಸೌತ್ ಸ್ಟಾರ್ ನಟಿ ತ್ರಿಶಾ ಕೃಷ್ಣನ್ ಬಗ್ಗೆ ನಟ ಮನ್ಸೂರ್ ಅಲಿ ಖಾನ್ ನೀಡಿದ ಹೇಳಿಕೆ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಮನ್ಸೂರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಚೆನ್ನೈ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಇದೀಗ ನಟ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಚೆನ್ನೈ ನಗರದ ಥೌಸಂಡ್ ಲೈಟ್ಸ್ ಪೊಲೀಸ್ ಠಾಣೆ ನಟ ಮನ್ಸೂರ್ ಅಲಿ ಖಾನ್ ಹೇಳಿಕೆ ವಿವಾದ ಸಂಬಂಧ ದೂರು ದಾಖಲಿಸಿಕೊಂಡಿತ್ತು. ಠಾಣೆಯಿಂದ ನೋಟಿಸ್ ಪಡೆದ ಒಂದು ದಿನದ ನಂತರ (ಗುರುವಾರ) ನಟ ಮನ್ಸೂರ್ ಅಲಿ ಖಾನ್ ಅವರು ಚೆನ್ನೈನ ಪ್ರಧಾನ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ನಟಿ ತ್ರಿಶಾ ಕೃಷ್ಣನ್ ಅವರ ವಿರುದ್ಧದ ಅವಹೇಳನಕಾರಿ ಹೇಳಿಕೆ ಆರೋಪ ಹಿನ್ನೆಲೆ ಅವರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನಟನಿಗೆ ನೋಟಿಸ್ ನೀಡಲಾಗಿತ್ತು. ತಮಿಳು ಚಿತ್ರರಂಗದಲ್ಲಿ ಖಳನಾಯಕನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಮನ್ಸೂರ್ ಅವರಿಗೆ ಇಂದು ಬೆಳಗ್ಗೆ 11.30ಕ್ಕೆ ಪೊಲೀಸರೆದುರು ಹಾಜರಾಗುವಂತೆ ನೋಟಿಸ್ನಲ್ಲಿ ಸೂಚಿಸಲಾಗಿತ್ತು.
ಚೆನ್ನೈ ನಗರದ ಥೌಸಂಡ್ ಲೈಟ್ಸ್ ಪೊಲೀಸ್ ಠಾಣೆ (All Women Police, Thousand Lights) ನಟನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ (ಲೈಂಗಿಕ ಕಿರುಕುಳ) ಮತ್ತು 509 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. ಸಂದರ್ಶನದ ಸಂದರ್ಭ ನಟ, ಮಹಿಳೆಯರ ನಮ್ರತೆಯನ್ನು ಅವಮಾನಿಸುವಂತೆ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.