ದಕ್ಷಿಣ ಚಿತ್ರರಂಗದ ನಟ ಮನ್ಸೂರ್ ಅಲಿ ಖಾನ್ ಅವರು 'ಲಿಯೋ' ಚಿತ್ರದ ಸಹ ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಾಕಷ್ಟು ಟೀಕೆ ಎದುರಿಸಿದ್ದರು. ತಮ್ಮ ಹೇಳಿಕೆ ಸುತ್ತ ಸೃಷ್ಟಿಯಾಗಿರುವ ವಿವಾದವನ್ನು ಉದ್ದೇಶಿಸಿ ನಟ ಮಾತನಾಡಿದ್ದಾರೆ. ತಮ್ಮ ಹೇಳಿಕೆಗಳು ವ್ಯಾಪಕ ಟೀಕೆ ಎದುರಿಸಿದ ನಂತರ, ಮನ್ಸೂರ್ ಅಲಿ ಖಾನ್ ತಮ್ಮ ಕಾಮೆಂಟ್‌ಗಳನ್ನು ಸ್ಪಷ್ಟಪಡಿಸಲು ಪ್ರಯತ್ನಿದ್ದಾರೆ. ನನ್ನ ಹೇಳಿಕೆಗಳು ಸಾಮಾನ್ಯವಾಗಿ ಮತ್ತು ತಮಾಷೆಯಾಗಿ ವ್ಯಕ್ತವಾಗಿವೆ ಎಂದು ತಿಳಿಸಿದ್ದಾರೆ.
ಮನ್ಸೂರ್ ಅಲಿ ಖಾನ್ ಸ್ಪಷ್ಟನೆ:ನಟ ಮನ್ಸೂರ್ ಅಲಿ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಮಾತುಗಳನ್ನು ತಪ್ಪಾಗಿ ನಿರೂಪಿಸಿದ್ದಕ್ಕಾಗಿ ನಟ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ, ನಟಿ ತ್ರಿಷಾ ಕೃಷ್ಣನ್ ಅವರಿಗೆ ಕಾಂಪ್ಲಿಮೆಂಟ್ಸ್ ಕೊಡುವ ಉದ್ದೇಶದಿಂದ ಆ ಹೇಳಿಕೆಗಳನ್ನು ನೀಡಿದ್ದೇನೆ ಎಂದಿದ್ದಾರೆ. ಲಿಯೋ ಚಿತ್ರದಲ್ಲಿ ನಟಿ ತ್ರಿಷಾ ಕೃಷ್ಣನ್ ಪಾತ್ರವನ್ನು ''ಪರ್ವತವನ್ನು ಹೊತ್ತ ಹನುಮಂತ''ನಿಗೆ ಹೋಲಿಸಲಾಗಿದೆ. ಚಿತ್ರದಲ್ಲಿ ಅವರ ಪಾತ್ರ ಬಹಳ ಪ್ರಮುಖವಾಗಿದೆ. ಅವರಿಗೆ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದೇನೆ. ವಿಷಾದನೀಯ ಸಂಗತಿ ಎಂದರೆ, ನನ್ನ ತಮಾಷೆಯ ಹೇಳಿಕೆಯನ್ನು ತೆಗೆದುಹಾಕಲಾಗಿದೆ, ಕೆಲ ಹೇಳಿಕೆಗಳನ್ನಷ್ಟೇ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ" ಎಂದು ಮನ್ಸೂರ್ ಅಲಿ ಖಾನ್ ತಮಿಳಿನಲ್ಲಿ ಬರೆದುಕೊಂಡಿದ್ದಾರೆ.
ವಿವಾದನ್ನು ಉದ್ದೇಶಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಖಾನ್ ಅವರು, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ತಪ್ಪಾಗಿ ನಿರೂಪಿಸಲಾಗುತ್ತಿದೆ. ರಾಜಕೀಯದ ನಡೆ, ಸಿನಿಮಾಗಳ ಮೇಲೆ ಪ್ರಭಾವ ಬೀರಲು ಈ ರೀತಿ ಮಾಡಲಾಗುತ್ತಿದೆ ಎಂಬರ್ಥದಲ್ಲಿ ಮನ್ಸೂರ್ ಅಲಿ ಖಾನ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಮಹಿಳೆಯರ ಗೌರವದ ಬಗ್ಗೆ ಒತ್ತಿಹೇಳಿದರು. ಈ ಹಿಂದೆ ಹಲವು ನಟಿಮಣಿಯರೊಂದಿಗೆ ಕೆಲಸ ಮಾಡಿರುವುದು ಮತ್ತು ತಮ್ಮ ಹೆಣ್ಣುಮಕ್ಕಳನ್ನು ಬೆಳೆಸಿರುವ ರೀತಿ ತಮ್ಮ ವರ್ತನೆ, ಮೌಲ್ಯಗಳಿಗೆ ಸಾಕ್ಷಿಯಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.