ಚೆನ್ನೈ(ತಮಿಳುನಾಡು): ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿ ತ್ರಿಶಾ ಕೃಷ್ಣನ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳು ನಟ ಮನ್ಸೂರ್ ಅಲಿ ಖಾನ್ ಇಂದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ತಮ್ಮ ಹೇಳಿಕೆ ಸಲುವಾಗಿ ಸಾಕಷ್ಟು ಟೀಕೆ ಸ್ವೀಕರಿಸಿದ್ದ ಮನ್ಸೂರ್ ಅಲಿ ಖಾನ್ ಅವರ ವಿರುದ್ಧ ಕಾನೂನು ಕ್ರಮ ಆರಂಭಗೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ 'ಲಿಯೋ' ಸಿನಿಮಾ ನಟ ಘಟನೆಯ ಬಗ್ಗೆ ಮಾತನಾಡುತ್ತಾ, ತಮ್ಮ ಹೇಳಿಕೆಗಳಿಗೆ ಕ್ಷಮೆ ಕೋರಿದ್ದಾರೆ.
"ನನ್ನ ಸಹನಟಿ ತ್ರಿಷಾ, ದಯವಿಟ್ಟು ನನ್ನನ್ನು ಕ್ಷಮಿಸಿ" ಎಂಬ ಬರಹವಿರುವ ಪೋಸ್ಟ್ ಅನ್ನು ಸಿನಿಮಾ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಮನ್ಸೂರ್ ಅಲಿ ಖಾನ್ ಇನ್ಸ್ಟಾಗ್ರಾಮ್ನಲ್ಲಿ ತಮಿಳಿನಲ್ಲಿ ದೊಡ್ಡ ಬರಹ ಪೋಸ್ಟ್ ಮಾಡಿದ್ದಾರೆ.
ತ್ರಿಶಾ ಕೃಷ್ಣನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿತ್ತು. ಥೌಸಂಡ್ ಲೈಟ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ ಮತ್ತು 509ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ನಟನಿಗೆ ಬುಧವಾರ ನೋಟಿಸ್ ನೀಡಲಾಗಿತ್ತು. ಗುರುವಾರ ಮನ್ಸೂರ್ ಅಲಿ ಖಾನ್ ಚೆನ್ನೈನ ಪ್ರಧಾನ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿತ್ತು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಕೋರಿದ್ದಾರೆ.
ಕಳೆದೊಂದು ವಾರದಿಂದ ನಟನ ಹೇಳಿಕೆಗಳಿಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿರಿಯ ನಟಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರು ಮನ್ಸೂರ್ ಅಲಿ ಖಾನ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಖಡಕ್ಕಾಗಿ ತಿಳಿಸಿದ್ದರು. ಅವರ ಎಕ್ಸ್ ಪೋಸ್ಟ್ನಲ್ಲಿ, "ಎನ್‌ಸಿಡಬ್ಲ್ಯೂ ಸದಸ್ಯೆಯಾಗಿ, ನಾನು ಈಗಾಗಲೇ ಮನ್ಸೂರ್ ಅಲಿ ಖಾನ್ ಅವರ ವಿಷಯವನ್ನು ನನ್ನ ಹಿರಿಯರೊಂದಿಗೆ ಪ್ರಸ್ತಾಪಿಸಿದ್ದೇನೆ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ಅಂಥ ಆಕ್ಷೇಪಾರ್ಹ ಆಲೋಚನೆಗಳಿಂದ / ಘಟನೆಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ತಿಳಿಸಿದ್ದರು.