ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಂಟೆಂಟ್ ಜೊತೆಗೆ ಹೊಸ ಕಥೆಯನ್ನು ಒಳಗೊಂಡಿರುವ ಚಿತ್ರಗಳು ಬರುತ್ತಿವೆ. ಈ ಸಾಲಿನಲ್ಲಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಮತ್ತು ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಹಾಗು ಪಂಚಮಿ ರಾವ್ ಮುಖ್ಯ ಭೂಮಿಕೆಯಲ್ಲಿರುವ 'ಮಂಕು ಭಾಯ್ ಫಾಕ್ಸಿ ರಾಣಿ' ಸಿನಿಮಾ ಇಂಥಹದ್ದೇ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಗಗನ್ ಎಂ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಸಿಂಹದ ವೇಷ ಹಾಕುವ ಯುವಕನ ಪ್ರೇಮಕಥೆ: ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಗಗನ್ ಎಂ ಮಾತನಾಡಿ, ಈವರೆಗೆ ಕಿರುಚಿತ್ರ, ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದೇನೆ. ತುಳು ಸಿನಿಮಾವೊಂದಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಮಂಕು ಭಾಯ್ ಫಾಕ್ಸಿ ರಾಣಿ ನನ್ನ ನಿರ್ದೇಶನದ ಮೊದಲ ಸಿನಿಮಾ. ಮೊದಲು ಇದನ್ನು ಶಾರ್ಟ್ ಮೂವಿ ಮಾಡೋಣ ಎಂದು ಪ್ಲಾನ್ ಮಾಡಿಕೊಂಡಿದ್ದೆ. ರೂಪೇಶ್ ಶೆಟ್ಟಿ ಈ ಸಿನಿಮಾ ಮಾಡಲು ಒಪ್ಪಿಕೊಂಡ ಮೇಲೆ ಇದರ ಕಥೆಯನ್ನು ಸಿನಿಮಾಗೆ ಹೇಗೆ ಬೇಕೋ ಹಾಗೆ ಸಿದ್ಧ ಮಾಡಿಕೊಂಡೆವು. 2019ರಲ್ಲಿ ಆರಂಭವಾದ ಸಿನಿಮಾ ಇದು. ಸದ್ಯ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಪೂರ್ತಿ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿ ಸಾಗಲಿದೆ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಯುವಕನ ಜೀವನದಲ್ಲಿ ನಡೆಯುವ ಪ್ರೇಮಕಥೆ ಸುತ್ತ ಕಥೆಯನ್ನು ಹೆಣೆಯಲಾಗಿದೆ ಎಂದು ತಿಳಿಸಿದರು.
ಬಿಗ್ ಬಾಸ್ ಬಗ್ಗೆ ರೂಪೇಶ್ ಶೆಟ್ಟಿ ಮಾತು: ನಟ ರೂಪೇಶ್ ಶೆಟ್ಟಿ ಮಾತನಾಡಿ, ಈ ಸಿನಿಮಾ ಚಿತ್ರೀಕರಣ ಆಗಿ ಮೂರು ವರ್ಷ ಆಯ್ತು. ಚಿತ್ರದಲ್ಲಿ 'ಕಂಟೆಂಟ್' ಹೀರೋ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕೋ ಹುಡುಗನ ಕಥೆ ಚಿತ್ರದಲ್ಲಿದೆ. ಸ್ನೇಹಿತರೇ ಆತನಿಗೆ ಪ್ರಪಂಚ. ಇದರೊಂದಿಗೆ ಒಂದು ಮುಗ್ಧ ಲವ್ ಸ್ಟೋರಿ ಇರುವ ಸಿನಿಮಾ. ನಿರ್ದೇಶಕ ಗಗನ್ ಒಂದು ಕನ್ನಡ ಸಿನಿಮಾ ಮಾಡೋಣ ಎಂದಾಗ ಒಪ್ಪಿಕೊಂಡೆ. ನಾನು ಸಿನಿಮಾ ಕಮರ್ಶಿಯಲ್ ಆಗಿರಬೇಕು, ಹೀಗಿರಬೇಕು ಅಂದುಕೊಂಡಿದ್ದೆ. ಆದ್ರೆ ಈ ಸಿನಿಮಾ ಪ್ಲಾಟ್ ಹಾಗಿರಲಿಲ್ಲ. ಚಿತ್ರಕ್ಕೆ ದಪ್ಪ ಆಗಬೇಕು, ದಾಡಿ ತೆಗೆಯಬೇಕು, ಯಕ್ಷಗಾನದಲ್ಲಿ ಸಿಂಹದ ಪಾತ್ರ ಮಾಡುವ ವ್ಯಕ್ತಿಯ ಪಾತ್ರ ಎಂದು ನಿರ್ದೇಶಕರು ಹೇಳಿದ್ರು. ಚಿತ್ರಕ್ಕಾಗಿ ಎಂಟು ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದೇನೆ. ಕನ್ನಡದಲ್ಲಿ ಲೀಡ್ ನಟನಾಗಿ ಅಭಿನಯಿಸುತ್ತಿರುವ ಐದನೇ ಸಿನಿಮಾವಿದು. ಡೇಂಜರ್ ಝೋನ್, ಅನುಷ್ಕಾ, ನಿಶಬ್ಧ 2, ಗೋವಿಂದ ಗೋವಿಂದ ಸಿನಿಮಾ ಮಾಡಿದ್ದೇನೆ. ಆಗೆಲ್ಲಾ ಆ ಸಿನಿಮಾದಲ್ಲಿ ನಾನಿದ್ದೇನೆ ಎಂದು ಹೇಳುತ್ತಿದ್ದೆ. ಆದ್ರೆ ಫಸ್ಟ್ ಟೈಂ ರೂಪೇಶ್ ಶೆಟ್ಟಿ ಸಿನಿಮಾ ಬರುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ, ಇದು ತುಂಬಾ ಖುಷಿ ಕೊಡ್ತಿದೆ. ಇದಕ್ಕೆಲ್ಲ ಬಿಗ್ ಬಾಸ್ ಕಾರಣ. ಜನವರಿ 13ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.