ಭಾರತೀಯ ಸಿನಿಮಾ ರಂಗದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳ ಮೂಲಕ ತನ್ನದೇ ಛಾಪು ಮೂಡಿಸಿರೋ ನಿರ್ದೇಶಕ ಮಣಿರತ್ನಂ. ಇವರು ಕೇವಲ ನಿರ್ದೇಶಕರಷ್ಟೇ ಅಲ್ಲ, ಸಿನಿಮಾ ಕನಸನ್ನು ಕಾಣುವ ಅನೇಕರ ಪಾಲಿನ ದ್ರೋಣಾಚಾರ್ಯ ಕೂಡ ಹೌದು. ನಿರಂತರವಾದ ಕಲಿಕೆ ಹಾಗೂ ಸವಾಲನ್ನು ಸಮರ್ಥವಾಗಿ ಎದುರಿಸುವ ಮೂಲಕ ಕೇವಲ ಭಾರತ ಅಷ್ಟೇ ಅಲ್ಲದೇ ಸಪ್ತಸಾಗರದಾಚೆಯೂ ಮೋಡಿ ಮಾಡಿರುವ ಮಣಿರತ್ನಂ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 67ನೇ ವಸಂತಕ್ಕೆ ಕಾಲಿಟ್ಟಿರೋ ಮಣಿರತ್ನಂ ಸೂಪರ್ ಹಿಟ್ ಚಿತ್ರಗಳ ಸರ್ದಾರ.
ಕಲಾವಿದರಿಗೆ ಆ್ಯಕ್ಷನ್ ಕಟ್ ಹೇಳಿದ ಕ್ಷಣ ಸಿನಿಮಾ ನಿರ್ದೇಶನದ ಅ.ಆ.ಇ.ಈ ಯನ್ನು ನಿರ್ದೇಶಕರಿಂದ ಕಲಿಯದೇ, ಏಕಲವ್ಯನಂತೆ ದೂರದಿಂದಲೇ ಎಲ್ಲವನ್ನೂ ಗ್ರಹಿಸಿ ನಿರ್ದೇಶಕನಾದವರು ಮಣಿರತ್ನಂ. ಕಾಮರ್ಸ್ ಹಾಗೂ ಎಂ.ಬಿ.ಎ ಪದವಿ ಪಡೆದಿದ್ದರೂ, ಅಣ್ಣ ಜಿ. ವೆಂಕಟೇಶ್ವರನ್ (ನಿರ್ಮಾಪಕ) ಪ್ರಭಾವದಿಂದ ಚಿತ್ರರಂಗಕ್ಕೆ ಬಂದ ಮಣಿರತ್ನಂ ಮೊದಲ ಸಲ ಆ್ಯಕ್ಷನ್ ಕಟ್ ಹೇಳಿದ್ದು ಕನ್ನಡದ 'ಪಲ್ಲವಿ ಅನುಪಲ್ಲವಿ' ಚಿತ್ರಕ್ಕೆ.
ಕನ್ನಡದಲ್ಲಿ ಕೋಕಿಲಾ ಚಿತ್ರ ನಿರ್ಮಿಸಿದ್ದ ಛಾಯಾಗ್ರಾಹಕ ಬಾಲು ಮಹೇಂದರ್, ಸಂಗೀತ ನಿರ್ದೇಶಕ ಇಳಯರಾಜಾ, ಪಲ್ಲವಿ ಅನುಪಲ್ಲವಿ ಚಿತ್ರದ ಬೆನ್ನೆಲುಬು. ಇವರಿಬ್ಬರ ಮೇಲಿನ ನಂಬಿಕೆಯಿಂದಲೇ ಮಣಿರತ್ನಂ ಧೈರ್ಯವಾಗಿ ಚಿತ್ರ ನಿರ್ದೇಶನದ ಸಾಹಸಕ್ಕೆ ಮುಂದಾಗಿದ್ದರು.
ಆ್ಯಕ್ಷನ್ ಕಟ್ ಹೇಳಿದ ಮೊದಲ ಚಿತ್ರ 'ಪಲ್ಲವಿ ಅನುಪಲ್ಲವಿ' ಆದರೆ, ಪಲ್ಲವಿ ಅನುಪಲ್ಲವಿಯ ಹಾಡು ಎಲ್ಲರ ಬಾಯಲ್ಲಿ ನಲಿದಾಡಿದರೂ ಚಿತ್ರ ಅಂದುಕೊಂಡತೆ ಯಶಸ್ಸು ಕಾಣಲಿಲ್ಲ. ಆ ಕಾಲಕ್ಕೆ ಪಲ್ಲವಿ ಅನುಪಲ್ಲವಿ ಗೆದ್ದಿದ್ದರೆ, ಮಣಿರತ್ನಂ ಕನ್ನಡದಲ್ಲಿಯೇ ನೆಲೆ ನಿಲ್ಲುತ್ತಿದ್ದರೇನೋ. ಆದರೆ, ಕನ್ನಡದಿಂದ ಪ್ರಾರಂಭಗೊಂಡ ಮಣಿರತ್ನಂ ಸಿನಿ ಪ್ರಯಾಣ ತಮಿಳುನಾಡಿನತ್ತ ಹೊರಟಿತು. ಹಿಂದಿಯಲ್ಲಿಯೂ ಮಣಿರತ್ನಂ ಹೆಸರು ಚಾಲ್ತಿಗೆ ಬಂತು.
ಆದರೆ ಅದಕ್ಕೂ ಮುನ್ನ ತಾಳ್ಮೆಯ ಪರೀಕ್ಷೆಯೂ ನಡೆಯಿತು. ಏಕೆಂದರೆ ಉನಾರೂ, ಪಾಗಲ್ ನಿಲುವು, ಇದಯ ಕೋವಿಲ್ ಒಂದಾದ ಮೇಲೊಂದರಂತೆ ಸಿನಿಮಾಗಳು ನೆಲ ಕಚ್ಚಿದವು. ಆದರೆ ಮಣಿರತ್ನಂ ಧೃತಿಗೆಡಲಿಲ್ಲ. ಬದಲಿಗೆ ಪ್ರಯತ್ನ ಮುಂದುವರೆಸಿದರು. ಅದರ ಫಲವೇ 'ಮೌನರಾಗಂ'.
ಬಾಲಿವುಡ್ ಕಿಂಗ್ ಖಾನ್ ಜೊತೆ ಮಣಿರತ್ನಂ 1986ರಲ್ಲಿ ಬಂದ ಮೌನರಾಗಂ 175 ದಿನಗಳ ಪ್ರದರ್ಶನ ಕಂಡಿತ್ತು. ಆ ನಂತರ ಅಂಜಲಿ, ದಳಪತಿ, ಇರುವರ್ ಹೀಗೆ ಆ ಕಾಲಕ್ಕೆ ಬಂದ ಮಣಿರತ್ನಂ ಚಿತ್ರಗಳು ಕೇವಲ ವಿಮರ್ಷಕರ ಮನಸನ್ನಷ್ಟೇ ಅಲ್ಲ ಪ್ರೇಕ್ಷಕರ ಹೃದಯವನ್ನೂ ಗೆದ್ದವು. ಮಣಿರತ್ನಂ ನಿರ್ದೇಶನದ ನಾಯಕನ್ ಭಾರತೀಯ ಚಿತ್ರರಂಗದಲ್ಲಿಯೇ ಹೊಸದೊಂದು ಸಂಚಲನವನ್ನೇ ಸೃಷ್ಟಿಸಿತ್ತು. ನೆನಪಿರಲಿ, ಸತ್ಯಜಿತ್ ರೇ ಅವರ ಪಥೇರ್ ಪಂಚಾಲಿ, ಅಪೂರ್ ಸಂಸಾರ್, ಅಪರಾಜಿತೋ, ಗುರುದತ್ ಅವರ ಪ್ಯಾಸಾ ಸಿನಿಮಾದ ಸಾಲಿನಲ್ಲಿ ವಿಶ್ವ ಮಟ್ಟದಲ್ಲಿ ಮಿಂಚಿದ ನಾಯಕನ್ ನೂರು ವಿಶ್ವಶ್ರೇಷ್ಠ ಚಿತ್ರಗಳಲ್ಲಿ ಒಂದು.
ಈ ಎಲ್ಲ ಸಿನಿಮಾಗಳು ಮಣಿರತ್ನಂ ಹೆಸರನ್ನು ದಕ್ಷಿಣದಲ್ಲಿ ಬೆಳಗಿಸಿದರೆ, ರೋಜಾ ಹಾಗೂ ಬಾಂಬೆ ಸಿನಿಮಾ ಮಣಿರತ್ನಂ ಅವರ ಕೀರ್ತಿಯನ್ನು ಉತ್ತರಕ್ಕೂ ಪಸರಿಸಿದವು. ಆ ನಂತರ ಹಿಂದಿಯಲ್ಲಿ ಬಂದ ಯುವ, ದಿಲ್ ಸೇ, ಗುರು ಚಿತ್ರಗಳು ಮಣಿರತ್ನಂ ಜನಪ್ರಿಯತೆಯನ್ನು ಹೆಚ್ಚಿಸಿದವು.
ಆ ನಂತರ ರಾವಣ್, ಕಾದಲ್ ಸಿನಿಮಾ ಮಣಿರತ್ನಂ ನಿರ್ದೇಶನಕ್ಕೆ ಸವಾಲೆಸೆದವು. ಅನೇಕ ಚರ್ಚೆ ಹಾಗೂ ಪ್ರಶ್ನೆ ಹುಟ್ಟಿ ಹಾಕಿದವು. ಆದರೂ ಮಣಿರತ್ನಂ ತಲೆ ಕೆಡಿಸಿಕೊಳ್ಳಲಿಲ್ಲ. ತಮ್ಮ ಪಾಡಿಗೆ ಸಿನಿಮಾ ಕೆಲಸ ಮಾಡುತ್ತಾ ಮುನ್ನಡೆದರು. ಓ ಕಾದಲ್ ಕಣ್ಮಣಿ, ಚೆಕ್ಕ ಚಿವಂತ ವಾನಮ್ ಸಿನಿಮಾಗಳ ಗೆಲುವು ಮಣಿರತ್ನಂ ಉತ್ಸಾಹವನ್ನ ಹೆಚ್ಚಿಸಿದವು. ಸದ್ಯ ಪೊನ್ನಿಯನ್ ಸೆಲ್ವನ್ ಚಿತ್ರದ ಗೆಲುವಿನ ಮೂಲಕ ಮತ್ತೊಮ್ಮೆ ಮನೆ ಮಾತಾಗಿದ್ದಾರೆ. ತಮ್ಮ ಅಭಿಮಾನಿಗಳ ಹೃದಯವನ್ನು ಮತ್ತೆ ಮಣಿರತ್ನಂ ಗೆದ್ದಿದ್ದಾರೆ. ಇನ್ನಷ್ಟು ಹೊಸ ತರಹದ ಪ್ರಯೋಗಗಳನ್ನು ಮಾಡುವ ಆಲೋಚನೆಯಲ್ಲಿಯೂ ಮಣಿರತ್ನಂ ಇದ್ದಾರೆ.
ಇದನ್ನೂ ಓದಿ:Photos: ಮಳೆ, ಚಳಿ, ಬಿಸಿಲು ಲೆಕ್ಕಕ್ಕಿಲ್ಲ - 'ಕೇರಳ ಸ್ಟೋರಿ' ಅದಾ ಶರ್ಮಾ ಶ್ರಮ
ದೃಶ್ಯ ವೈಭವ, ಆಧುನಿಕ ತಂತ್ರ ಕೌಶಲ್ಯ, ಕೌತುಕ ಪೂರ್ಣ ಕಥೆ ಹಾಗೂ ನಿರೂಪಣೆ ಮಣಿರತ್ನಂ ಸಿನಿಮಾಗಳ ಟ್ರೇಡ್ ಮಾರ್ಕ ಅಂದ್ರೆ ತಪ್ಪಿಲ್ಲ. ಹೀಗೆ ತಮ್ಮ ಕೆಲಸಕ್ಕೆ ಅಂತಾರಾಷ್ಟ್ರೀಯ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್ ಫೇರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.