ಸಿನಿಮಾ ಮೇಲಿನ ಪ್ಯಾಶನ್‌ಗಾಗಿ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿ ನಟನೆ, ನಿರ್ದೇಶನದತ್ತ ಮುಖ ಮಾಡಿದವರ ಕುರಿತಾಗಿ ಅದೆಷ್ಟೋ ಉದಾಹರಣೆಗಳಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಅಜಯ್ ಸರ್ಪೇಷ್ಕರ್. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಅಜಯ್ ಸರ್ಪೇಷ್ಕರ್ ಅವರಿಗೆ ಸಿನಿಮಾ, ಫೋಟೋಗ್ರಫಿಯಲ್ಲಿ ಮೊದಲಿನಿಂದಲೂ ಅಪಾರ ಆಸಕ್ತಿ. ಇದಕ್ಕಾಗಿ ಸಾಫ್ಟ್‌ವೇರ್ ಕೆಲಸಕ್ಕೆ ಫುಲ್‌ಸ್ಟಾಪಿಟ್ಟು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸೈನ್ಸ್ ಫಿಕ್ಷನ್ ಸಿನಿಮಾ 'ಮಂಡಲ' ಮೂಲಕ ಅವರೀಗ ಪ್ರೇಕ್ಷಕರೆದುರು ಬರಲು ಸಜ್ಜಾಗಿ ನಿಂತಿದ್ದಾರೆ.
ಫಸ್ಟ್ ಲುಕ್ ಮೂಲಕ ಗಮನ ಸೆಳೆದ 'ಮಂಡಲ' ಫ್ಯಾಮಿಲಿ ಡ್ರಾಮಾ ಸಬ್ಜೆಕ್ಟ್ ಹೊಂದಿದೆ. ಮೊದಲ ಚಿತ್ರದಲ್ಲಿ ಒಂದೊಳ್ಳೆ ಸಬ್ಜೆಕ್ಟ್ ಜೊತೆಗೆ ಅನುಭವಿ ಕಲಾವಿದರನ್ನು ಒಟ್ಟುಗೂಡಿಸಿ ನಿರ್ದೇಶನ ಮಾಡಿದ್ದಾರೆ ಅಜಯ್ ಸರ್ಪೇಷ್ಕರ್. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಕಿರಣ್ ಶ್ರೀನಿವಾಸ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
2018ರಲ್ಲೇ ನಡೆದಿತ್ತು ಶೂಟಿಂಗ್: "2018ರಲ್ಲೇ ಮಂಡಲ ಸಿನಿಮಾದ ಚಿತ್ರೀಕರಣ ಮುಗಿದಿತ್ತು. ಸೈನ್ಸ್ ಫಿಕ್ಷನ್ ಸಿನಿಮಾವಾದ್ದರಿಂದ ಚಿತ್ರವನ್ನು ವಿಶ್ಯುವಲ್ ಎಫೆಕ್ಟ್ ಆವರಿಸಿಕೊಂಡಿದೆ. ಈ ಕೆಲಸದಲ್ಲಿರುವಾಗ ಕೋವಿಡ್ ಬಾಧಿಸಿ ಕೆಲಸ ಸ್ಥಗಿತವಾಗಿತ್ತು. ಇದೀಗ ಸಿನಿಮಾದ ಕೆಲಸ ಪೂರ್ಣಗೊಂಡಿದೆ. ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿದೆ" ಎಂದು ಅಜಯ್ ಸರ್ಪೇಷ್ಕರ್ ಹೇಳಿದರು.