ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ( Celina Jaitly) ಅವರಿಗೆ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಮದುವೆ ಪ್ರಸ್ತಾಪ ಇಟ್ಟಿದ್ದಾರೆ. ಅಪರಿಚಿತರ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ನಟಿ, ಈಗಾಗಲೇ ಹೋಟೆಲ್ ಉದ್ಯಮಿ ಪೀಟರ್ ಹಾಗ್ ಅವರನ್ನು ಮದುವೆಯಾಗಿದ್ದೇನೆ ಮತ್ತು ನಮಗೆ ಮೂವರು ಗಂಡು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ನಟ ನಟಿಯರಿಗೆ ಈ ರೀತಿಯ ಸನ್ನಿವೇಶಗಳು ಎದುರಾಗುತ್ತದೆ. ಅಭಿಮಾನಿಗಳು ತಮ್ಮ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸುತ್ತಾರೆ. ಕೆಲವರು ಅಭಿಮಾನದ ಪ್ರೀತಿಗೆ ಸಂಬಂಧದ ಹೆಸರು ಕೊಡಲು ಯತ್ನಿಸುತ್ತಾರೆ. ಅದೇ ರೀತಿ ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ನಟಿ ಸೆಲೀನಾ ಜೇಟ್ಲಿ ಈ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ''ನನ್ನನ್ನು ಮದುವೆ ಆಗಿ, ಘರ್ ಜಮಾಯಿ (ಮನೆ ಅಳಿಯ) ಮಾಡಿಕೊಳ್ಳಿ'' ಎಂದು ಕೇಳಿಕೊಂಡಿದ್ದಾರೆ. ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ನಟಿ, ತಾನು ವಿವಾಹಿತೆ, ಓರ್ವ ತಾಯಿ ಎಂದು ಹೇಳಿಕೊಂಡಿದ್ದಾರೆ.
ಆ ವ್ಯಕ್ತಿಯ ಟ್ವೀಟ್ ಹೀಗಿತ್ತು: ಗುರುವಾರದಂದು ಟ್ವಿಟರ್ ಬಳಕೆದಾರರೋರ್ವರು ಸೆಲೀನಾ ಅವರಿಗೆ ಈ ರೀತಿಯಾಗಿ ಸಂದೇಶವನ್ನು ಕಳುಹಿಸಿದ್ದಾರೆ. 'ಸೆಲೀನಾ ಜೇಟ್ಲಿ, ಆಲ್ ದಿ ಬೆಸ್ಟ್. ನನ್ನ ಆರೋಗ್ಯ ಚೆನ್ನಾಗಿಲ್ಲ. ನನ್ನ ಆರೋಗ್ಯ ಹದಗೆಡುತ್ತಿದೆ. ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ. ತುರ್ತಾಗಿ ನಾನು ಘರ್ ಜಮಾಯಿ ಆಗಲು ಸಿದ್ಧನಾಗಿದ್ದೇನೆ. ದಯವಿಟ್ಟು ನನ್ನನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿ. ನನ್ನ ಜೀವನ ಮತ್ತು ಆರೋಗ್ಯವನ್ನು ಉಳಿಸಲು ಸಾಧ್ಯವಾದಷ್ಟು ಬೇಗ ನನ್ನನ್ನು ಮದುವೆಯಾಗಿ. ಪ್ರತಿಕ್ರಿಯಿಸಿ, ವಂದನೆಗಳು. ಕೋಲ್ಕತ್ತಾದಿಂದ ವಿಜಯ್ ಮಗನ್‌ಲಾಲ್ ವೋರಾ' ಎಂದು ಟ್ವೀಟ್ ಮಾಡಿದ್ದಾರೆ.
ನಟಿಯ ಪ್ರತಿಕ್ರಿಯೆ ಏನು?ನಟಿ ಸೆಲೀನಾ ಜೇಟ್ಲಿ ಈ ಟ್ವೀಟ್ ಅನ್ನು ಪರಿಗಣಿಸಿ, ಆ ಪ್ರಸ್ತಾಪವನ್ನು ತಮ್ಮದೇ ಆದ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಒಂದು ರೀತಿಯ ವ್ಯಂಗ್ಯ ಉತ್ತರ ಕೊಟ್ಟಿದ್ದಾರೆ. ನಾನು ನನ್ನ ಪತಿ ಮತ್ತು ಮೂರು ಮಕ್ಕಳನ್ನು ಕೇಳಿ, ನಿಮ್ಮ ಟ್ವೀಟ್ಗೆ ಹಿಂತಿರುಗುತ್ತೇನೆ ಎಂದು ತಿಳಿಸಿದ್ದಾರೆ.