ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು. ಈ ಬಗ್ಗೆ ಸರ್ಕಾರಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಸರ್ಕಾರದ ಜೊತೆಗೆ ಸಿನಿಮಾ ತಾರೆಯರು ಕೂಡ ಧ್ವನಿಗೂಡಿಸುತ್ತಿರುತ್ತಾರೆ. ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಕಥೆಗಳ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ತಾರಿಣಿ ಅಂತಾ ಸಿನಿಮಾ ಮಾಡ್ತಾ ಇದ್ದಾರೆ. ಕೆಲವು ತಿಂಗಳುಗಳ ಹಿಂದೆ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿತ್ತು.
ನಿರ್ದೇಶಕ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ತಾರಿಣಿ ಸಿನಿಮಾ ಇದೀಗ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೊಂದಾದ ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ಗೆ ಆಯ್ಕೆಯಾಗಿದೆ. ಜನವರಿ ತಿಂಗಳಲ್ಲಿ ರಾಜಸ್ಥಾನದ ಜೈಪುರ್ನಲ್ಲಿ ತಾರಿಣಿ ಚಿತ್ರ ಪ್ರದರ್ಶನವಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಬರುವ ಚಿತ್ರ ಪ್ರೇಮಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳುವರು ಎಂದು ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಗರ್ಭಿಣಿ ಕುರಿತಾದ ಕಥಾ ಸಾರಾಂಶ ಹೊಂದಿರುವ ತಾರಿಣಿ ಚಿತ್ರದಲ್ಲಿ ನಿಜವಾಗಿಯೂ ಪ್ರಗ್ನೆಂಟ್ ಆಗಿಯೇ ಮಮತಾ ರಾಹುತ್ ಅವರು ಅಭಿನಯಿಸಿದ್ದಾರೆ. ಆಗಷ್ಟೇ ಹುಟ್ಟಿದ ಮಮತಾ ರಾಹುತ್ ಅವರ ಮಗುವಿನ ದೃಶ್ಯಗಳೂ ತಾರಿಣಿ ಚಿತ್ರದಲ್ಲಿರುವುದು ವಿಶೇಷ. ಈಗಾಗಲೇ ಅನೇಕ ಚಿತ್ರೋತ್ಸವಗಳಿಗೂ ಈ ಚಿತ್ರವನ್ನು ಕಳುಹಿಸಲಾಗಿದೆ. ಎಲ್ಲ ಕಡೆಯೂ ಪ್ರದರ್ಶನಗೊಂಡು ಅವಾರ್ಡ್ ಗೆಲ್ಲುವ ನಿರೀಕ್ಷೆಯಿದೆ ಎಂದು ನಿರ್ದೇಶಕರು ಆತ್ಮವಿಶ್ವಾಸ ತೋರಿದರು.